ಕೃಷಿಯಲ್ಲಿ ಆಸಕ್ತಿ ಮೂಡಿಸಲು ಯುವಜನತೆಗೆ ಶಿಕ್ಷಣ ರೂಪದಲ್ಲಿ ಮಾಹಿತಿ ಸಿಗಬೇಕು: ಸ್ವರ್ಣವಲ್ಲೀ ಶ್ರೀ


ಶಿರಸಿ: ಯುವಜನತೆಯಲ್ಲಿ ಕೃಷಿ ಅಭಿರುಚಿ ಮೂಡಿಸುವ ಕಾರ್ಯ ನಮ್ಮಿಂದಾಗುತ್ತಿಲ್ಲ. ಶಿಕ್ಷಣದ ರೂಪದಲ್ಲಿ ಈ ಮಾಹಿತಿಗಳು ಅವರಿಗೆ ಸಿಗಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ನಡೆದ ಎರಡು ದಿನಗಳ ಕೃಷಿ ಜಯಂತಿಯ ಸಮಾರೋಪದಲ್ಲಿ ಅವರು ಮಾತನಾಡಿದರು. ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬುದು ನಿಜ. ಆದರೆ, ಅವರು ಏಕೆ ವಿಮುಖರಾಗಿದ್ದಾರೆ ಎಂಬ ಬಗ್ಗೆಯೂ ನಾವು ಆಲೋಚಿಸಬೇಕಾಗಿದೆ ಎಂದರು.

ಮುಖ್ಯ ಅತಿಥಿ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತನಾಡಿ, ಋಷಿ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿ ಸಮ್ಮಿಲನವಾದರೆ ಖುಷಿ ಸಂಸ್ಕೃತಿ ಈ ನೆಲದಲ್ಲಿ ಚಿಗುರುತ್ತದೆ. ಕೃಷಿ ಈ ನೆಲದ ಪರಂಪರೆಯಾಗಿದೆ. ಕೃಷಿಕರು ಖುಷಿಯಾಗಿರಲು ಋಷಿಗಳ ಮಾರ್ಗದರ್ಶನ ಬೇಕು. ಇವೆರಡೂ ಮಿಳಿತವಾದರೆ ಉತ್ತಮ ಸಂಸ್ಕೃತಿ ಬೆಳೆಯಲು ಅನುಕೂಲ ಎಂದರು.

ಕೃಷಿ ತಜ್ಞ ಶಂಕರ ಭಟ್ಟ ಬದನಾಜೆ ಮಾತನಾಡಿ, ಕೃಷಿ ಸಂಸ್ಕೃತಿ ವಿಸ್ತರಿಸಲು ಜನರು ಕೃಷಿ ಹಾಗೂ ಕೃಷಿ ಪೂರಕ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸಬೇಕು. ಹಾಗಾದಾಗ ನಿಜರ್ಥದಲ್ಲಿ ಕೃಷಿ ಪರಂಪರೆ ಬೆಳೆಯುತ್ತದೆ ಎಂದರು.

ಜಿ.ವಿ.ಹೆಗಡೆ ಹುಳಗೋಳ ಕಾರ್ಯಕ್ರಮದ ವರದಿ ಹಾಗೂ ನಿರ್ಣಯ ಮಂಡಿಸಿದರು. ಈ ವೇಳೆ ವಿ.ಎನ್.ಹೆಗಡೆ, ಶಿವಾನಂದ ದೀಕ್ಷಿತ್ ಇದ್ದರು. ಮಠದ ಪಾಠಶಾಲೆ ವಿದ್ಯಾರ್ಥಿಗಳು ವೇದಘೋಷ ಹೇಳಿದರು. ಸಾಂಭವಿ ಭಟ್ಟ ಪ್ರಾರ್ಥಿಸಿದರು. ಆರ್.ಎನ್.ಹೆಗಡೆ ಸ್ವಾಗತಿಸಿದರು. ಸುರೇಶ ಹಕ್ಕಿಮನೆ ನಿರೂಪಿಸಿದರು. ಆರ್.ಎಸ್.ಹೆಗಡೆ ವಂದಿಸಿದರು.

ನಿರ್ಣಯಗಳು: 1. ಬಿದಿರು ಬೆಳೆಯನ್ನು ಉತ್ತೇಜಿಸಲು ಅಂಗಾಂಶ ಕಸಿಯಿಂದ ತಯಾರಾದ ಉತ್ತಮ ಸಸಿಗಳನ್ನು ರೈತರಿಗೆ ಸುಲಭ ದರದಲ್ಲಿ ಅರಣ್ಯ ಇಲಾಖೆ ಒದಗಿಸಬೇಕು.
2. ಮಾರುಕಟ್ಟೆಯಲ್ಲಿ ದೊರೆಯುವ ಸಾವಯವ ಗೊಬ್ಬರಗಳ ಗುಣಮಟ್ಟ ಕಾಪಾಡಲು ಕೃಷಿ ಇಲಾಖೆಯು ಬಿಗಿಯಾದ ಕ್ರಮ ಕೈಗೊಳ್ಳಬೇಕು.
3. ಬೇಸಿಗೆಯ ಬಿಸಿಲಿನಿಂದ ಬೆಳೆ ಕಾಪಾಡಲು ಮಲೆನಾಡಿನಲ್ಲಿ ಹರಿಯುವ ಸಣ್ಣ ಸಣ್ಣ ಹಳ್ಳಿಗಳಿಂದ ಏತ ನೀರಾವರಿ ಯೋಜನೆ ಕೈಗೊಳ್ಳಬೇಕು.
4. ಕೃಷಿಕರಿಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವದಿ ಸಾಲಗಳ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಪ್ರಾಥಮಿಕ ಸಹಕಾರಿ ಸಂಘದಲ್ಲಿ ಸಿಗುವಂತಾಗಬೇಕು.
5. ಕೃಷಿಕರ ವಾಸ್ತವ್ಯ ಸ್ಥಳವಾದ ಬೆಟ್ಟ, ಹಾಡಿ, ಗಾಂವಠಾಣಾ ಮುಂತಾದ ಸ್ಥಳಗಳನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವುದು ಕಷ್ಟದ ಸಂಗತಿಯಾದ್ದರಿಂದ ಕೃಷಿಕರಿಗೆ ಅಗತ್ಯ ಗೃಹ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಕೃಷಿಕರ ಗೃಹ ನಿರ್ಮಾಣ ಸಂಬಂಧಿಸಿ ಕಾನೂನು ಸಡಲೀಕರಣಗೊಳಿಸಿ ಸಲೀಸಾಗಿ ಸಾಲ ದೊರಕುವಂತೆ ಮಾಡಬೇಕು.
6. ಸ್ವಾತಂತ್ರ್ಯ ದೊರೆತು 7ದಶಕಗಳು ಕಳೆದರೂ ಬ್ರಿಟೀಷ್ ವಸಹಾತು ಅರಣ್ಯ ನೀತಿ ಜಾರಿಯಲ್ಲಿದೆ. ರೈತ ಬೆಳೆದ ಅರಣ್ಯ ಉತ್ಪನ್ನ, ಮರ ಮಟ್ಟುಗಳನ್ನು ಮಾರಲು ಅರಣ್ಯ ಇಲಾಖೆಯ ಶೋಷಣೆ ಎದುರಿಸುವಂತಾಗಿದೆ. ಕಾನೂನು ಬದಲಿಸಿ ಗ್ರಾಪಂ ಮಟ್ಟದಲ್ಲಿ ಪರವಾನಿಗೆ ದೊರಕುವಂತಾಗಬೇಕು.
7. ಕೃಷಿ ಮತ್ತು ತೋಟಗಾರಿಕಾ ವ್ಯವಸಾಯ ಕ್ರಮವನ್ನು ಪ್ರೌಢಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿ ಶಾಲೆಗಳಲ್ಲಿ ಅದರ ಪ್ರಾಯೋಗಿಕ ಶಿಕ್ಷಣ ಕಡ್ಡಾಯಗೊಳಿಸಬೇಕು.
8.ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿಯೊಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಳೆಕೊಯ್ಲು ಮತ್ತು ಇಂಗುಗುಂಡಿ ನಿರ್ಮಿಸಲು ಸರ್ಕಾರ ಪ್ರೋತ್ಸಾಹ ಧನ ನೀಡಬೇಕು

Categories: ಜಿಲ್ಲಾ ಸುದ್ದಿ

Leave A Reply

Your email address will not be published.