ಹಳೆ ಹೊಸತರ ಮಿಶ್ರಣದ ಕೃಷಿ ಎಲ್ಲರೂ ಮಾಡುವಂತಾಗಬೇಕು: ಸ್ವರ್ಣವಲ್ಲೀ ಶ್ರೀ


ಶಿರಸಿ: ಕೃಷಿ ಚಿಂತನೆ ಪುನರ್ ವಿಮರ್ಶೆಗೆ ಒಳಪಡಬೇಕು. ಹಳೆ ಹೊಸತರ ಮಿಶ್ರಣದ ಕೃಷಿ ಜಾರಿಗೆ ಬಂದು ಎಲ್ಲರೂ ಮಾಡುವಂತೆ ಆಗಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಆಶಯ ವ್ಯಕ್ತಪಡಿಸಿದರು.

ತಾಲೂಕಿನ ಸೋಂದಾ ಸ್ವರ್ಣವಲ್ಲೀ ನಡೆಯುತ್ತಿರುವ ಎರಡು ದಿನಗಳ ಕೃಷಿ ಜಯಂತಿಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಅವರು, ಶಾಸ್ತ್ರಗಳಲ್ಲಿ ಉಲ್ಲೇಖವಾದ, ಆಧುನಿಕ ವಿಜ್ಞಾದಲ್ಲಿ ಕಂಡು ಹಿಡಿಯಲಾದ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಹಳತರ ಹೊಸತರ ಮಿಶ್ರಣದೊಂದಿಗೆ ಉತ್ತಮ ಕೃಷಿ ಪದ್ಧತಿ ಜಾರಿಗೆ ಬರಬೇಕು ಎಂದರು.‌

ಕೃಷಿ ಜಯಂತಿಯನ್ನು ಇಂದಿನ ಯುವಕ, ಯುವತಿಯರಲ್ಲಿ ಕೃಷಿ ಕುರಿತು ಆಸಕ್ತಿ ಹೆಚ್ಚಿಸುವ ಪ್ರಧಾನ ಉದ್ದೇಶದಿಂದ ನಡೆಸಲಾಗುತ್ತಿದೆ‌. ಅವರ ವಯಸ್ಸಿನಲ್ಲಿ ದೊಡ್ಡ ದೊಡ್ಡ ವಿಚಾರಗಳು ಬರುವುದರಿಂದ ಕೃಷಿಯತ್ತ ವಿಮುಖರಾಗುತ್ತಿದ್ದಾರೆ. ಆದರೆ ಈಗ ಪ್ರೌಢರಿಗೂ ಕಡಿಮೆಯಾಗಿದೆ ಅನಿಸುತ್ತಿದೆ. ಇದು ದೊಡ್ಡ ಸಮಸ್ಯೆಯಾಗಿದ್ದು, ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಆಹಾರ ಪೂರೈಕೆ ಮಾಡುವ ಅಗತ್ಯವಿದೆ. ಕೃಷಿ ಮಾಡುವವರ ಜೊತೆಗೆ ಕೃಷಿ ಭೂಮಿಯೂ ಕಡಿಮೆ ಆಗುತ್ತಿದೆ. ಇದರಿಂದ ಕೃಷಿ ಉತ್ಪನ್ನಗಳು ಕಡಿಮೆ ಆಗುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ಜನಸಂಖ್ಯೆ ಹೆಚ್ಚಿದ ಹಾಗೆ ಕೃಷಿಯಲ್ಲೂ ಬೆಳವಣಿಗೆ ಆಗಬೇಕು. ಹೆಚ್ಚು ಜನರು ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಆಗಬೇಕು. ಯುವ ಜನಾಂಗ ಕೃಷಿಯತ್ತ ಮುಖ ಮಾಡಬೇಕು ಎಂದರು.

ಕೃಷಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಬಳ್ಳಾರಿ ಹೊಸಪೇಟೆಯ ಕೊಟ್ಟೊರೇಶ್ವರ ಸ್ವಾಮಿ ಮಹಾಸಂಸ್ಥಾನದ ಶ್ರೀ ಡಾ.ಸಂಗನ ಬಸವ ಮಹಾಸ್ವಾಮಿಜಿ ಮಾತನಾಡಿ, ಕೃಷಿ ಸಮೃದ್ಧ, ಸಂತೋಷ, ಆರೋಗ್ಯದಾಯವಾಗಿರಬೇಕು. ಅಂದಾಗ ಮಾತ್ರ ಅದಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತದೆ. ದೇಶದ ಆದಾಯದಲ್ಲಿ ಕೃಷಿ ಆದಾಯ ಹೆಚ್ಚಬೇಕು. ಅಲ್ಲಿಯವರೆಗೆ ಬಡತನ ಕಡಿಮೆ ಆಗುವುದಿಲ್ಲ ಉಳಿದ ಆದಾಯದಿಂದ ವ್ಯತ್ಯಾಸ ಇಲ್ಲ. ಕೃಷಿಯಿಂದ ಆದಾಯ ಹೆಚ್ಚಾದಲ್ಲಿ ಉತ್ತಮ ದಿನಗಳು ಬರುತ್ತದೆ
ಆದರೆ ಇಂದು ಕೃಷಿ ಚಿಂತಾನ ಜನಕ ಪರಿಸ್ಥಿತಿಯಲ್ಲಿ ಇದೆ. ಸರ್ಕಾರವು ಸಾಲಮನ್ನಾ ಮಾಡುವ ಅವಶ್ಯಕತೆಯಿಲ್ಲ.‌ಪ್ರತಿ ಬಾರಿ ಸಾಲಮನ್ನಾ ಎನ್ನುವುದಕ್ಕಿಂತ ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ದರವನ್ನು ನೀಡಿದರೆ ಉತ್ತಮ.‌ ಆಗ ದೇಶ ಉದ್ಧಾರ ಆಗುತ್ತದೆ. ರೈತರ ಸಮಸ್ಯೆಗಳೂ ಕಡಿಮೆ ಆಗುತ್ತದೆ ಎಂದರು.

‘ಸ್ವರ್ಣವಲ್ಲೀ ಪ್ರಭಾ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಹಲವಾರು ತೊಂದರೆ ತಾಪತ್ರಯಗಳು ಅವರನ್ನು ಕಾಡುತ್ತಿದೆ. ಆದರೆ ಕೃಷಿಯನ್ನು ಬಿಟ್ಟು ನಾಡು, ರಾಷ್ಟ್ರದ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿಯಲ್ಲಿ ನಂಬಿಕೆ ಕಳೆದುಕೊಳ್ಳದೇ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಎಲ್ಲರೂ ಕೃಷಿಯನ್ನು ಆಸಕ್ತಿಯಿಂದ ಮುಂದುವರೆಸಿಕೊಂಡು ಹೋಗಬೇಕು ಎಂದರು.

ಮುಖ್ಯ ಅತಿಥಿ ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎಮ್.ಇಂದಿರೇಶ ಮಾತನಾಡಿ, ಸಾವಯವ ಕೃಷಿ ಮತ್ತು ಇಸ್ರೇಲ್ ಮಾದರಿ ಕೃಷಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ದೊರೆಯುತ್ತದೆ.‌ಕೃಷಿ ಲಾಭದಾಯಕ ವ್ಯವಸ್ಥೆಯಾಗಿದೆ. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ವ್ಯವಸ್ಥಿತವಾಗಿ ಬೆಳೆಗಳನ್ನು ಬೆಳೆ ದಲ್ಲಿ ಉತ್ತಮ ಲಾಭ ಪಡೆಯಬಹುದಾಗಿದೆ. ಯಾಂತ್ರಿಕೃತ ಬೇಸಾಯದಿಂದ ಲಾಭ ಹೆಚ್ಚಾಗಲಿದೆ ಎಂದರು.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಕುಲಪತಿ ಡಾ.ಎಮ್.ಕೆ.ನಾಯಕ ಮಾತನಾಡಿ, ಸ್ವರ್ಣವಲ್ಲೀಯಲ್ಲಿ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಕೃಷಿ ಉತ್ಸವ ಆಚರಣೆ ಆಗುತ್ತಿದೆ. ಇದರಿಂದ ಕೃಷಿ ಸಂಪತ್ತಿಗೆ ಉನ್ನರ ಭವಿಷ್ಯ ಇದೆ ಎಂದು ಸಾಬೀತಾಗುತ್ತದೆ. ಹಾರ್ಡವೇರ್, ಸಾಪ್ಟವೇರ್ ಯಾವ ಕ್ಷೇತ್ರಗಳೂ ಆಹಾರದ ಹೊರತಾಗಿ ಇಲ್ಲ. ಮಾನವ ಇರುವವರಗೆ ಕೃಷಿ ಸಂಸ್ಕೃತಿ ಅಗತ್ಯ ಇದೆ. ಇರುತ್ತದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಕೃಷಿ ಎಂದಿಗೂ ಶಾಶ್ವತವಾಗಿದೆ ಎಂದರು.

ಸಾಧಕ ಕೃಷಿಕ(ಕೃಷಿ ಕಂಠೀರವ) ಪ್ರಶಸ್ತಿಯನ್ನು ವಿಠಲ ಶಾಂತಾರಾಮ ಹೆಗಡೆ ಲಿಂಗದಕೋಣ, ಸಾಧಕ ಕೃಷಿ ಮಹಿಳೆ ಪ್ರಶಸ್ತಿಯನ್ನು ಸುಮಿತ್ರಾ ತಿಮ್ಮಣ್ಣ ಭಟ್ಟ ಯಲೂಗಾರ, ಉತ್ತಮ ಸಾಧಕ ಕೃಷಿ ಅವಿಭಕ್ತ ಕುಟುಂಬ ಪ್ರಶಸ್ತಿಯನ್ನು‌ ಕೇಶವ ಮಹಾಬಲೇಶ್ವರ ಹೆಗಡೆ ಗಡಿಕೈ ಹಾಗೂ ಸಹೋದರರು ಹಾಗೂ ಸಾಧಕ ಕೃಷಿ ಕುಶಲಕರ್ಮಿ ಪ್ರಶಸ್ತಿಯನ್ನು‌ ರವೀಂದ್ರ ಗೋಪಾಲಕೃಷ್ಣ ಹೆಗಡೆ ಕಂಚಿಕೈ ಮತ್ತು ಕೃಷಿ ವಿಶೇಷ ಪ್ರಶಸ್ತಿಯನ್ನು ಗೋಪಾಲಕೃಷ್ಣ ನರಸಿಂಹ ಭಟ್ಟ ಹುಲಗೋಡ ಅವರಿಗೆ ನೀಡಿ ಗೌರವಿಸಲಾಯಿತು.

. ಈ ವೇಳೆ ಸ್ವರ್ಣವಲ್ಲೀ ಗ್ರಾಮಾಭ್ಯುದ್ಯದ ಅಧ್ಯಕ್ಷ ಶಿವಾನಂದ ದಿಕ್ಷೀತ್, ಸ್ವರ್ಣವಲ್ಲೀ ಸಂಸ್ಥಾನದ ಅಧ್ಯಕ್ಷ ವಿ.ಎನ್.ಹೆಗಡೆ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.