ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 13 ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲೆ: ಸಿದ್ದತೆಗೆ ಶಿಕ್ಷಕರ ಸಭೆ

ಶಿರಸಿ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಒಂದನೇ ತರಗತಿ ಆರಂಭಿಸುವ ಬಗ್ಗೆ ಸಂಬಂಧಿಸಿದ ಶಾಲೆಯ ಶಿಕ್ಷಕರ ಸಭೆ ನಗರದ ಭಾರತ ಸೇವಾದಲ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪನಿರ್ದೇಶಕ ದಿವಾಕರ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಒಂದನೇ ತರಗತಿ ಆರಂಭಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 13 ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಆಂಗ್ಲ ಮಾದ್ಯಮ ಒಂದನೇ ತರಗತಿ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಆಯ್ದ ಶಿಕ್ಷಕರಿಗೆ ಇಂಗ್ಲಿಷ್ ಬುನಾದಿ ತರಬೇತಿ ನೀಡಲಾಗುತ್ತಿದೆ. ಶಾಲೆಗಳಲ್ಲಿ ಕೊಠಡಿ ಸಿದ್ಧತೆ ಮಾಡಿಕೊಳ್ಳಲು, ಶಾಲೆಯನ್ನು ಅಲಂಕರಿಸುವ ಪ್ರಕ್ರಿಯೆ ಆರಂಭಿಸಲು ಶಾಲಾ ಮುಖ್ಯಸ್ಥರು ಕ್ರಮವಹಿಸಲು ತಿಳಿಸಿದರು. ಪಾಲಕರಿಗೆ ಮತ್ತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಲು ಶಾಲಾ ಮುಖ್ಯಸ್ಥರು ಗಮನ ನೀಡಬೇಕು ಎಂದು ಸೂಚಿಸಿದ ಅವರು ಪ್ರಾರಂಭದ ಒಂದೂವರೆ ತಿಂಗಳು ಮಕ್ಕಳನ್ನು ಮಾತೃಭಾಷೆಯಿಂದ ಪರಿಚಯ ಭಾಷೆಗೆ ಒಗ್ಗಿಕೊಳ್ಳುವಂತೆ ಮಾಡುವ ವಿವಿಧ ಚಟುವಟಿಕೆಗಳಿರುತ್ತವೆ. ಈ ಚಟುವಟಿಕೆಗಳಿಗೆ ಪಠ್ಯಪುಸ್ತಕದ ಅಗತ್ಯತೆ ಇರುವುದಿಲ್ಲ ಎನ್ನುವುದನ್ನು ಹೇಳಿದರು.

ಶಿಕ್ಷಕರ ಕೊರತೆ ಮತ್ತು ಕೊಠಡಿಗಳ ಕೊರತೆ ಇದ್ದಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಪರಿಹಾರ ಕಂಡುಕೊಳ್ಳುವಂತೆ ಶಾಲಾ ಮುಖ್ಯಸ್ಥರಿಗೆ ಇದೇ ವೇಳೆ ಹೇಳಿದರು. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪ್ರಾಚಾರ್ಯರೇ ಈ ಎಲ್ಲ ಪ್ರಕ್ರಿಯೆಗಳಿಗೆ ಉಸ್ತುವಾರಿ ವಹಿಸಿಕೊಳ್ಳುವಂತೆ ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಡಯಟ್ ಪ್ರಾಚಾರ್ಯ ಬಿ.ವಿ.ನಾಯಕ, ಶಿಕ್ಷಣಾಧಿಕಾರಿ ಎಂ.ಎಸ್. ಹೆಗಡೆ, ಎಚ್.ಬಿ.ನದಾಫ, ಸಿದ್ಧಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಆರ್. ನಾಯ್ಕ, ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಡಯಟ್ ಉಪನ್ಯಾಸಕರಾದ ರಾಘವೇಂದ್ರ ಹೆಗಡೆ, ಹಫಿಜಖಾನ, ಇಂಗ್ಲಿಷ್ ಬುನಾದಿ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳು, ಇಂಗ್ಲಿಷ್ ಮಾಧ್ಯಮ ಒಂದನೇ ತರಗತಿ ಆರಂಭಿಸಲಿರುವ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಇಂಗ್ಲಿಷ್ ಬೋಧಕರು ಹಾಜರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.