ಮಳೆಗಾಲ ಪ್ರಾರಂಭಕ್ಕೆ ಇನ್ನೂ ಸಿದ್ಧವಾಗಿಲ್ಲ ಕುಮಟಾ ಪುರಸಭೆ: ಹೂಳು- ಗಿಡಗಳು ತುಂಬಿರುವ ಗಟಾರ

ಕುಮಟಾ: ಸಧ್ಯದಲ್ಲೇ ಮಳೆಗಾಲ ಆರಂಭವಾಗಲಿದೆ. ಮಳೆಗಾಲವನ್ನು ಎದುರಿಸಲು ಕೈಗೊಳ್ಳಬೇಕಾದ ಯಾವ ಕಾಮಗಾರಿಯನ್ನೂ ಇಲ್ಲಿನ ಪುರಸಭೆ ಈ ವರೆಗೂ ಆರಂಭಿಸಲಿಲ್ಲ. ಬೆಂಕಿ ಬಿದ್ದ ಮೇಲೆ ಬಾವಿ ತೋಡುವಂತಹ ಇವರ ಆಡಳಿತದ ಅವ್ಯವಸ್ಥೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.

23 ವಾರ್ಡಗಳನ್ನು ಹೊಂದಿರುವ ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಪ್ರಮುಖ ಹಾಗೂ ಉಪ ರಸ್ತೆಗಳೆಂದು ನೂರಕ್ಕೂ ಅಧಿಕ ರಸ್ತೆಗಳಿವೆ. ಈ ರಸ್ತೆಗಳಂಚಿನಲ್ಲಿ ಒಳಚರಂಡಿ ಕಾಮಗಾರಿ ನಡೆಸಿದ್ದರಿಂದ ರಸ್ತೆಗಳಲ್ಲಿ ಉಬ್ಬು ತಗ್ಗುಗಳು ನಿರ್ಮಾಣವಾಗಿವೆ. ಇದರ ಹೊರತಾಗಿ ಅನೇಕ ರಸ್ತೆಗಳಿಗೆ ಗÀಟಾರಗಳಿವೆ. ಎಲ್ಲ ಗಟಾರಗಳು ಕಸ, ಹೂಳು ಹಾಗೂ ಗಿಡಗಳಿಂದ ಮುಚ್ಚಿ ಹೋಗಿವೆ. ಮುಚ್ಚಿರುವ ಗಟಾರವನ್ನು ಸ್ವಚ್ಛಗೊಳಿಸದಿದ್ದರೆ ಮತ್ತು ರಸ್ತೆಗಳಲ್ಲಿ ನಿರ್ಮಾಣವಾಗಿರುವ ಉಬ್ಬು ತಗ್ಗುಗಳನ್ನು ಸರಿಪಡಿಸದಿದ್ದರೆ ಮಳೆಗಾಲದಲ್ಲಿ ಸುರಿಯವ ನೀರು ಸರಾಗವಾಗಿ ಹೋಗಲು ಸಾಧ್ಯವೇ ಇಲ್ಲ.

ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದಾಗಿ ಕಳೆದ ಸಾಲಿನ ಮಳೆಗಾಲದಲ್ಲಿ ಅನೇಕ ರಸ್ತೆಯಲ್ಲಿ ಜನರು ಓಡಾಟ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಕೆಲಕಡೆಗಳಲ್ಲಿನ ಗಟಾರಗಳು ಮುಚ್ಚಿಹೋಗಿರುವುದರಿಂದ ಅಂಗಡಿ ಮುಂಗಟ್ಟುಗಳಿಗೆ ನೀರೇರಲಾರಂಭಿಸಿದ್ದವು. ಇದರಿಂದ ಬೇಸತ್ತ ಜನತೆ ಆಗಾಗ ರಸ್ತೆ ತಡೆದು, ಪ್ರತಿಭಟನೆ ನಡೆಸಿ ಪುರಸಭೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಿದ್ದರು. ಈ ಎಲ್ಲ ಆಡಳಿತ ಧೋರಣೆಯಿಂದ ಪುರಸಭೆಗೆ ಸಾರ್ವಜನಿಕರೇ ದೊಡ್ಡ ತಲೆನೋವಾಗಿ ಪರಿಣಮಿಸಿದ್ದರು. ಇಷ್ಟೆಲ್ಲಾ ಆದರೂ ಸಹ ಪುರಸಭೆ ಇನ್ನೂ ಪಾಠಕಲಿತಂತಿಲ್ಲ ಎಂಬುದಕ್ಕೆ ಈ ಸಲದ ಮಳೆಗಾಲವನ್ನು ಎದುರಿಸಲು ಕೈಗೊಂಡಿರದ ಪೂರ್ವಸಿದ್ಧತೆಯೇ ಸಾಕ್ಷಿ.

ಏನಾಗಬೇಕು: ಮಳೆ ಬೀಳುವ ಮುನ್ನವೇ ಪಟ್ಟಣ ಹಾಗೂ ಪುರಸಭೆ ವ್ಯಾಪ್ತಿಯ ಗಟಾರಗಳಲ್ಲಿನ ಮಣ್ಣು, ಗಿಡ ಹಾಗೂ ಕಸಗಳನ್ನು ಸ್ವಚ್ಛಗೊಳಿಸುವ ಕಾರ್ಯವಾಗಬೇಕು. ಕೆಲಕಡೆಗಳಲ್ಲಿನ ಅನಾದಿಕಾಲದ ಗಟಾರಗಳು ಸಂಪೂರ್ಣ ಮುಚ್ಚಿಹೋಗಿವೆ. ಇದರಿಂದಾಗಿ ಮಳೆಗಾಲದಲ್ಲಿ ತ್ಯಾಜ್ಯನೀರು ಕೆಲ ಮನೆ ಹಾಗೂ ಅಂಗಡಿಗಳಿಗೆ ನುಗ್ಗುವ ಭೀತಿ ಎದುರಾಗಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಪುನಃ ಗಟಾರವನ್ನು ಕೊರೆಯುವ ಕಾರ್ಯವಾಗಬೇಕು.

ಕಳೆದ ವರ್ಷ ಮಳೆಗಾಲದ ಮುಂಚಿತವಾಗಿ ಪುರಸಭೆಗೆ ಗಟಾರದ ಸಮಸ್ಯೆಯ ಕುರಿತು ತಿಳಿಸಿದ್ದೆವು. ಆದರೆ ಮಳೆ ಬೀಳುವ ಮೊದಲು ಯಾವ ಮುಂಜಾಗ್ರತಾ ಕ್ರಮವನ್ನೂ ಕೈಗೊಂಡಿರಲಿಲ್ಲ. ಇದರಿಂದಾಗಿ ಎರಡು ಮೂರು ಬಾರಿ ನಮ್ಮ ಅಂಗಡಿಯೊಳಗೆ ನೀರು ನುಗ್ಗಿತ್ತು. ಪುರಸಭೆ ಈ ಬಾರಿಯಾದರೂ ಮಳೆ ಬೀಳುವ ಮುನ್ನವೇ ಗಟಾರವನ್ನು ಸ್ವಚ್ಛಗೊಳಿಸಲಿ. -ಸಂಜಯ ನಾಯ್ಕ {ಗೂಡಂಗಡಿಕಾರ}

Categories: ಜಿಲ್ಲಾ ಸುದ್ದಿ

Leave A Reply

Your email address will not be published.