22 ಸಂಶೋಧನಾ ಮಾದರಿಗಳ ಪ್ರದರ್ಶನ: 4 ಪ್ರಾಜೆಕ್ಟ್‌ಗೆ ಕೌನ್ಸಿಲ್ ಪ್ರಾಯೋಜಕತ್ವ

ಕಾರವಾರ: ಜಿಎಸ್‌ಐಟಿಯ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಬಾರಿ ಮೆಕ್ಯಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಒಟ್ಟೂ 22 ಸಂಶೋಧನಾ ಮಾದರಿಗಳನ್ನು ಸಿದ್ಧಪಡಿಸಿದ್ದರು. ಇವುಗಳಲ್ಲಿ 4 ಪ್ರಾಜೆಕ್ಟ್‌ಗಳನ್ನು ಮೆಚ್ಚಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕೌನ್ಸಿಲ್ ಪ್ರಾಯೋಜಕತ್ವ ವಹಿಸಿದರು.

ಕಾರವಾರ ತಾಲೂಕಿನ ಮಾಜಾಳಿಯ ಗಿರಿಜಾಬಾಯಿ ಸೈಲ್ ಎಂಜಿಯರಿಂಗ್ ಕಾಲೇಜಿನ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ತಯಾರಿಸಿದ ಸಂಶೋಧನಾ ಮಾದರಿಗಳ ಪ್ರದರ್ಶನ ಚಾಲನೆ ನೀಡಲಾಗಿದೆ.
ಕಂಪ್ಯೂಟರ್ ಸೈನ್ಸ್‌ನ ವಿದ್ಯಾರ್ಥಿಗಳಿಂದ 4, ಮೈಕಾನಿಕಲ್‌ನಲ್ಲಿ 10 ಮತ್ತು ಸಿವಿಲ್ ವಿಭಾಗದ 8 ಒಟ್ಟು 22 ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ಸಂಸ್ಥೆಯ ಟ್ರಸ್ಟಿ ಸಾಳುಂಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೈಕಾನಿಕಲ್ ವಿಭಾಗದ ವಿದ್ಯಾರ್ಥಿಗಳು ಉಪಯೋಗಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಸ್ಕರಿಸಿ ಪೆಟ್ರೋಲಿಯಂ ಉತ್ಪನ್ನ ಸಿದ್ಧಪಡಿಸಿದರು. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ನ್ನು ನಾಶಪಡಿಸುವುದು ದೊಡ್ಡ ತಲೆನೋವುವಾಗಿದ್ದು, ಇದನ್ನೇ ಬಳಸಿ ಅಗತ್ಯ ಉತ್ಪನ್ನ ಮಾಡುವ ಯೋಜನೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ನೆಲ್ಸನ್ ಪೌಲ್ ಡಿಸೋಜಾ, ರಾಯ್ಸ್‌ಟನ್ ಪಿಂಟೊ, ಶಶಿಧರ್ ಮತ್ತು ಮಂಜುನಾಥ್ ಆರ್.ಎಚ್.ರಿಂದ ನಡೆದಿದೆ. ಪ್ರೊ.ಮೋಹನಕುಮಾರ್ ವಿ.ಎಸ್. ಮಾರ್ಗದರ್ಶನದಲ್ಲಿ ಸುಮಾರು 10 ಸಾವಿರ ರು.ವೆಚ್ಚದಲ್ಲಿ ಈ ಯೋಜನೆ ಸಿದ್ಧಪಡಿಸಲಾಗಿದೆ.

ತ್ಯಾಜ್ಯಕಾರಕ ಪ್ಲಾಸ್ಟಿಕ್‌ಗಳನ್ನು ನೈಟ್ರೋಜನ್ ಮೂಲಕ 170 ಡಿಗ್ರಿ ಸೆಲ್ಸಿಯಸ್ ಉಷ್ಣದಲ್ಲಿ ಕರಗಿಸಿ ಪ್ಸೈರೋಸಿಸ್ ಎಂಬ ಕಚ್ಛಾ ವಸ್ತು ಪಡೆಯಲಾಗುತ್ತದೆ. ಇದನ್ನು ಪುನಃ ಶಾಖದ ಮೂಲಕ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿ ದ್ರಾವಣ ಪಡೆಯಲಾಗುತ್ತದೆ. ಇದನ್ನು ಡಿಸ್ಟಿಲರಿ ಪ್ರಕ್ರಿಯೆಗೆ ಒಳಪಡಿಸಿದಾಗ ಬಯೋಡೀಸೆಲ್, ಪೆಟ್ರೋಲ್ ಉತ್ಪನ್ನ ಪಡೆಯಬಹುದೆಂಬುದನ್ನು ವಿದ್ಯಾರ್ಥಿಗಳು ತೋರಿಸಿಕೊಟ್ಟರು. ಪ್ರತಿ 1 ಕೆಜಿ ಪ್ಲಾಸ್ಟಿಕ್‌ನಿಂದ 700 ಎಂಎಲ್ ಪ್ಸೈರೋಸಿಸ್ ಪಡೆಯಬಹುದು. ಈ ಯೋಜನೆಯನ್ನು ದೊಡ್ಡ ಪ್ರಮಾಣಕ್ಕೆ ವಿಸ್ತರಿಸಿದರೆ ಪ್ಲಾಸ್ಟಿಕ್‌ನಿಂದ ಪರಿಸರದ ಮೇಲಾಗುವ ನಷ್ಟ ಹೋಗಲಾಡಿಸುವ ಜೊತೆಗೆ ಪುನರ್ಬಳಕೆ ಮೂಲಕ ಇಂಧನವನ್ನೂ ಪಡೆಯಬಹುದು ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಮೊಬೈಲ್ ಆಪ್ ಮೂಲಕ ಅರಣ್ಯ ಲೂಟಿ ಮಾಡುವವರನ್ನು ಹಾಗೂ ಅರಣ್ಯ ಪ್ರದೇಶಕ್ಕೆ ಬೆಂಕಿ ತಗ್ಗುಲಿದರೆ ತಡೆಗಟ್ಟಲು ತಂತ್ರಜ್ಞಾನ ಬಳಸಿ ತಯಾರಿಸಿರುವ ಮಾದರಿ, ಪ್ರಕೃತಿ ವಿಕೋಪದ ಮುನ್ಸೂಚನೆ ನೀಡುವ ಮಾದರಿ, ಮುಖ ಚಹರೆ ಮೂಲಕ ಅಪರಾಧಿಗಳನ್ನು, ಅಪಾಯವನ್ನು ತಿಳಿಸಿಕೊಡುವ ಸಾಫ್ಟ್‌ವೇರ್ ತಯಾರಿಸಿದ್ದಾರೆ. ಇದಲ್ಲದೆ ಇನ್ನೂ ಅನೇಕ ಉತ್ತಮ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ.

ಸಿವಿಲ್ ವಿಭಾಗದವರು ಚಿಪ್ಪಿಕಲ್ಲಿನಿಂದ ಗಟ್ಟಿಮುಟ್ಟಾದ ಇಟ್ಟಂಗಿಗಳನ್ನು ತಯಾರಿಸಿದ ಮಾದರಿ, ರಾಷ್ಟ್ರೀಯ ಹೆದ್ದಾರಿಯನ್ನು ಅಪಘಾತ ರಹಿತ ದಾರಿಯಾಗಿ ಪರಿವರ್ತಿಸುವ ಮಾದರಿ, ಕೆರವಡಿ-ಉಳಗಾ ಸೇತುವೆ ಮಾದರಿ ಹೀಗೆ ಅನೇಕ ಮಾದರಿಗಳನ್ನು ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ಮಾನೆ ಮತ್ತು ಸಿಬ್ಬಂದಿಗಳು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.