ವ್ಯವಹಾರ ಸಂಬಂಧ: ವ್ಯಕ್ತಿ ಮೇಲೆ ಗಂಭೀರ ಹಲ್ಲೆ


ಕುಮಟಾ: ವ್ಯವಹಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನ ಮೇಲೆ ಇಬ್ಬರು ಬೀಯರ್ ಬಾಟಲಿಯಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ಕಳದ ಮೌಲಾನಾ ಆಝಾದ ರಸ್ತೆಯ ನಿವಾಸಿ ಉದ್ಯಮಿ ರಾಜೇಂದ್ರ ಸೀತಾರಾಮ ಭಟ್ಟ (36) ಹಲ್ಲೆಗೊಳಗಾದ ವ್ಯಕ್ತಿ. ಇವರಿಗೆ ಮೇ 11 ರಂದು ರಾತ್ರಿ ನೆಲ್ಲಿಕೇರಿ ಗ್ರೀನ್‍ಗೇಟ್ ಬಳಿ 10- 30 ರ ಸುಮಾರಿಗೆ ಸಹೋದರರಾದ ಹೆರವಟ್ಟಾದ ಪ್ರತೇಶ ಮೋಹನ ನಂಬಿಯಾರ ಹಾಗೂ ಪ್ರವೀಣ ಮೋಹನ ನಂಬಿಯಾರ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.

ಪೊಲೀಸ್ ದೂರಿನ ಪ್ರಕಾರ, ಸೊಲ್ಲಾಪುರದಲ್ಲಿ ಫಾರ್ಮಸಿ ಉದ್ಯಮ ಹೊಂದಿರುವ ರಾಜೇಂದ್ರ ಭಟ್ಟರ ಬಳಿ ಉದ್ಯೋಗಿಯಾಗಿದ್ದ ಪ್ರತೇಶ ನಂಬಿಯಾರ ಇವರು ಸುಮಾರು 15 ದಿನಗಳ ಹಿಂದೆ ರಾಜೇಂದ್ರ ಭಟ್ಟರ ವ್ಯವಹಾರಕ್ಕೆ ಸಂಬಂಧಿಸಿದ ಕೆಲ ದಾಖಲಾತಿ ಹಾಗೂ ಚೆಕ್‍ಗಳನ್ನು ಹೇಳದೇ ಕೇಳದೇ ತೆಗೆದುಕೊಂಡು ಸೊಲ್ಲಾಪುರದಿಂದ ಬಂದಿದ್ದು ಇದನ್ನು ಕೇಳಲು ರಾಜೇಂದ್ರ ಭಟ್ಟ ಕುಮಟಾಕ್ಕೆ ಬಂದಿದ್ದಾಗ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಲಾಗಿದೆ ಎಂದು ದೂರಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಮಟಾ ಪೊಲೀಸರು ತನಿಖೆ ನಡೆಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.