ನೆಬ್ಬೂರು ಸೃಷ್ಟಿಸಿದ ಪೌರಾಣಿಕ ಆವರಣ ಇನ್ನೊಬ್ಬರಿಂದ ಸಾಧ್ಯವಿಲ್ಲ: ನಾಗರಾಜ್ ಜೋಶಿ


ಸಿದ್ದಾಪುರ: ನೆಬ್ಬೂರು ನಾರಾಯಣ ಭಾಗವತ ಅವರು ಸೃಷ್ಟಿಸಿದ ಯಕ್ಷಗಾನೀಯ ಹಾಗೂ ಪೌರಾಣಿಕ ವಾತಾವರಣ ಇನ್ನೊಬ್ಬರಿಂದ ಪುನಃ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ್ ಜೋಶಿ ಸೋಂದಾ ನೆನಪಿಸಿಕೊಂಡರು.

ಅವರು ತಾಲೂಕಿನ ಕಲಗದ್ದೆ ನಾಟ್ಯ ವಿನಾಯಕ ದೇವಸ್ಥಾನದ ಆವಾರದಲ್ಲಿ ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನ ಹಾಗೂ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನ ಜಂಟಿಯಾಗಿ ಹಮ್ಮಿಕೊಂಡ ನೆಬ್ಬೂರು ನಮನ ಕಾರ್ಯಕ್ರಮದಲ್ಲಿ ಪವಿತ್ರ ವೃಕ್ಷಾರೋಪಣ ನಡೆಸಿ ಮಾತನಾಡಿದರು. ನೆಬ್ಬೂರು ಭಾಗವತರು ಸೃಷ್ಟಿಸಿದ ಘರಾನೆಯ ಅನುಕರಣೆ ಕಷ್ಟ. ಅವರು ತಾಳ ತಟ್ಟುವ ರೀತಿ, ಸ್ವರ ಮಾಧುರ್ಯ ಯಾರಿಗೂ ಬರಲು ಸಾಧ್ಯವಿಲ್ಲ ಎಂದ ಅವರು ನೆಬ್ಬೂರರ ನೆನಪಿನಲ್ಲಿ ವೃಕ್ಷ ನೆಟ್ಟಿದ್ದು ಅನುಕರಣೀಯ. ನೆಬ್ಬೂರು ಅವರ ನೆನಪನ್ನು ಚಿರಸ್ಥಾಯಿಗೊಳಿಸುವ ಕಾರ್ಯ ಸಮಾಜದಿಂದ ಆಗಬೇಕು ಎಂದರು.

ಬೆಂಗಳೂರಿನ ಪತ್ರಕರ್ತೆ ಭಾರತೀ ಹೆಗಡೆ, ಯಕ್ಷಗಾನದ ಮೂಲಕ ಅಂದಿನ ಕಾಲದ ಸನ್ನಿವೇಶಕ್ಕೆ ಒಯ್ಯುವ ತಾಕತ್ತು ಇದ್ದದ್ದು ನೆಬ್ಬೂರರಿಗೆ ಮಾತ್ರ. ಅಂಥ ಮೇರು ಕಲಾವಿದರು ಎಲ್ಲರಿಗೂ ಮಾದರಿ. ಅವರ ಸರಳತೆ, ಅವರು ಯಕ್ಷಗಾನ ಪ್ರೀತಿಸಿದ ರೀತಿ ಅನುಕರಣೀಯ ಎಂದರು. ಅರ್ಥದಾರಿ ಕಾಶ್ಯಪ ಪರ್ಣಕುಠಿ ಮಾತನಾಡಿ, ನೆಬ್ಬೂರು ಅವರ ಅಗಲಿಕೆ ನಿರ್ವಾತ ಸೃಷ್ಟಿಸಿದೆ. ಕೇಶವ ಹೆಗಡೆ ಕೊಳಗಿ ಅಂಥ ಭಾಗವತರು ಆ ಜವಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.

ಅನಂತ ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಸ್ವಾಗತಿಸಿದರು. ಶಂಭು ಶಿಷ್ಯ ಪ್ರತಿಷ್ಠಾನದ ಮುಖ್ಯಸ್ಥ ವಿನಾಯಕ ಹೆಗಡೆ ಕಲಗದ್ದೆ ಪ್ರಾಸ್ತಾವಿಕ ಮಾತನಾಡಿದರು.

ಬಳಿಕ ಅತಿಥಿ ಕಲಾವಿದರುಗಳಿಂದ ಭೀಷ್ಮ ಪರ್ವ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶರತ್ ಜಾನಕೈ, ಪ್ರಸನ್ನ ಹೆಗ್ಗಾರು ಸಹಕಾರ ನೀಡಿದರೆ, ಮುಮ್ಮೇಳದಲ್ಲಿ ಭೀಷ್ಮನಾಗಿ ವಿನಾಯಕ ಹೆಗಡೆ ಕಲಗದ್ದೆ, ಅರ್ಜುನನಾಗಿ ಅಶೋಕ ಭಟ್ಟ ಸಿದ್ದಾಪುರ, ಕೃಷ್ಣನಾಗಿ ಶಂಕರ ಹೆಗಡೆ ನೀಲಕೋಡು, ಕೌರವನಾಗಿ ಮಹಾಬಲೇಶ್ವರ ಇಟಗಿ, ಕರ್ಣನಾಗಿ ವೆಂಕಟೇಶ ಬೊಗ್ರಿಮಕ್ಕಿ, ಅಭಿಮನ್ಯುವಾಗಿ ತುಳಸಿ ಹೆಗಡೆ ಪಾತ್ರ ಕಟ್ಟಿದರು. ಎಂ.ಆರ್.ನಾಯ್ಕ ಕರ್ಸೇಬೈಲು ವೇಷಭೂಷಣ ಸಹಕಾರ ನೀಡಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.