ಅರಿವು ಶೈಕ್ಷಣಿಕ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕಾರವಾರ: ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಿಇಟಿ-ನೀಟ್ ಪರೀಕ್ಷೆಗೆ ಹಾಜರಾದ ವಿವಿಧ ವೃತ್ತಿಪರ ಕೋರ್ಸ್‍ಗಳಲ್ಲಿ ಸೇರಬಯಸುವ ಮತೀಯ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಹೊಸದಾಗಿ ಸಾಲ ಸೌಲಭ್ಯವನ್ನು ಒದಗಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಆಂಗ್ಲೋ ಇಂಡಿಯನ್ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಗರಿಷ್ಠ 75 ಸಾವಿರ ರೂ.ಗಳವರೆಗೆ ಶೇ.2 ರಷ್ಟು ಸೇವಾ ಶುಲ್ಕ ಆಧಾರದ ಮೇಲೆ ಹೊಸದಾಗಿ ಸಾಲ ಸೌಲಭ್ಯವನ್ನು ಒದಗಿಸಲಾಗುವುದು. ಸಾಲ ಸೌಲಭ್ಯ ಪಡೆಯಲು ಆಸಕ್ತರಿರುವ ಅರ್ಹ ಅಭ್ಯರ್ಥಿಗಳು ನಿಗಮದ ವೆಬ್‍ಸೈಟ್ kmdc.kar.nic.in/arivu2 ಗೆ ಭೇಟಿ ನೀಡಿ ಲಿಂಕ್‍ಗೆ ಕ್ಲಿಕ್ ಮಾಡಬೇಕು. ನಂತರ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕು.

ಸಲ್ಲಿಸಿದ ಅರ್ಜಿಯ ಪ್ರಿಂಟ್‍ಔಟ್‍ನ್ನು ತೆಗೆದುಕೊಂಡು ಕ್ಯೂಆರ್‍ಕೋಡ್‍ನೊಂದಿಗೆ ಇತರೆ ಅವಶ್ಯಕ ದಾಖಲೆಗಳೊಂದಿಗೆ ಜೂ.5ರೊಳಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ನಂತರ ಅರ್ಹ ವಿದ್ಯಾರ್ಥಿಗಳಿಗೆ ಅವರು ಸೇರಬಯಸುವ ಕಾಲೇಜಿಗೆ ಬೋಧನಾ ಶುಲ್ಕವನ್ನು ನೇರವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪಾವತಿಸಲಾಗುತ್ತದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ವಾಸೀಂ ಮಂಜೀಲ್ 1ನೇ ಮಹಡಿ, ಹೈ ಚರ್ಚರಸ್ತೆ ಕಾರವಾರ, ದೂರವಾಣಿ ಸಂಖ್ಯೆ 08382-221180 ಸಂಪರ್ಕಿಸಬಹುದಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.