ಅತಿ ಉಷ್ಣಾಂಶದಿಂದ ರೈತರ ಬೆಳೆ ಹಾನಿ: ಅಗತ್ಯ ಮಾಹಿತಿ ನಿರ್ದೇಶನ ನೀಡಿದ ತೋಟಗಾರಿಕಾ ಇಲಾಖೆ


ಶಿರಸಿ: ಈ ವರ್ಷದ ಸುಡು ಬೇಸಿಗೆಯ ಅತಿ ಉಷ್ಣಾಂಶದಿಂದಾಗಿ ರೈತರ ಬೆಳೆಗಳು ಹಾನಿಯಾಗಿದೆ. ಗೇರು ಮತ್ತು ಮಾವು ಬೆಳೆಯ ಹೂವುಗಳು ಸುಟ್ಟು ಕರಕಲಾಗಿದೆ. ಹೀಗೆ ಮುಂದುವರೆದರೆ ಮಲೆನಾಡು ಭಾಗದ ರೈತರ ಪ್ರಮುಖ ಬೆಳೆ ಅಡಿಕೆಯೂ ವಿವಿಧ ರೋಗಗಳಿಗೆ ತುತ್ತಾಗುವುದರಲ್ಲಿ ಸಂಶಯವಿಲ್ಲವೆಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

ಈ ಬಾರಿ ಹೆಚ್ಚು ಉಷ್ಣಾಂಶ ದಾಖಲಾಗಿರುವುದರಿಂದ ಮಳೆಗಾಲದ ಮೊದಲು ಕೈಗೊಳ್ಳಬೇಕಾದ ತೋಟಗಾರಿಕೆ ಬೆಳೆ ಸಂರಕ್ಷಣೆ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಕೆ ಅಗತ್ಯ ಮಾಹಿತಿಗಳನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅಡಿಕೆ ಬೆಳೆಯ ಅಡಿಕೆಯಲ್ಲಿ ಸಿಂಗಾರ ಡೈಬ್ಯಾಕ್ ರೋಗ, ಬಂಜೆ ಸಿಂಗಾರ ಮತ್ತು ಬಂಜೆ ಹೂ ಉತ್ಪತ್ತಿಯಾಗಿ ಸಿಂಗಾರ ಒಣಗುವ ಪ್ರಮಾಣ ಜಾಸ್ತಿಯಾಗಿರುವುದು ಹೆಚ್ಚಿನ ತೋಟಗಳಲ್ಲಿ ಕಂಡು ಬರಲಿದೆ. ಆದ್ದರಿಂದ ರೈತರು ಮಳೆಗಾಲದಲ್ಲಿ ತೋಟದಲ್ಲಿ ಬಾಳೆ, ಸೂಜಿ ಮೆಣಸು, ಸುವರ್ಣಗಡ್ಡೆ, ಕಾಳು ಮೆಣಸು, ಶುಂಠಿ, ಅರಿಶಿಣ ಇತ್ಯಾದಿ ಉಪ ಬೆಳೆಗಳನ್ನು ತೋಟಗಳ ಪರಿಸ್ಥಿತಿಗಳಿಗನುಗುಣವಾಗಿ ಆಯ್ಕೆ ಮಾಡಿಕೊಂಡು, ಬೆಳೆಯುವುದರ ಮೂಲಕ ಆರ್ಥಿಕ ನಷ್ಟವನ್ನು ಕಡಿಮೆಗೊಳಿಸಬಹುದಾಗಿದೆ.

ಈ ವರ್ಷದ ಮುಂಗಾರಿನ ಅವಧಿಯಲ್ಲಿ ಕಡಿಮೆ ಮಳೆ ಸುರಿಯುವ ಮುನ್ಸೂಚನೆಯಿದ್ದು, ಮಳೆಗಾಲದ ಪ್ರಾರಂಭ ತಡವಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆದ್ದರಿಂದ ಬೇಸಿಗೆಯಲ್ಲಿ ಕಂಡು ಬಂದಿರುವ ರೋಗ-ಕೀಟಗಳನ್ನು ನಿಯಂತ್ರಿಸುವುದು ಮತ್ತು ಮಳೆಗಾಲದ ಪೂರ್ವ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವುದು ಈ ಅವಧಿಯಲ್ಲಿ ಅವಶ್ಯವಾಗಿದೆ. ಅಡಿಕೆ ಗಿಡಗಳ ಎಲೆಗಳಿಗೆ ಮೈಟ್ಸ ಕೀಟ ಸಮಸ್ಯೆ ಕಂಡು ಬಂದಲ್ಲಿ ಡಿಕೋಪಾಲ್ 2.5 ಮಿ.ಲೀ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಅಡಿಕೆ ಎಲೆ ತುದಿಯಿಂದ ಒಣಗುತ್ತಿದ್ದರೆ ಅದಕ್ಕೆ ಕಾರ್ಬೆಂಡೆಂಜಿಂ 2 ಗ್ರಾಂ ಮತ್ತು ಮ್ಯಾಂಕೋಜೆಬ್ 2.5 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅಡಿಕೆ ಗಿಡಗಳ ಎಲೆಗಳಿಗೆ ಮೈಟ್ಸ ಕೀಟ ಸಮಸ್ಯೆ ಕಂಡು ಬಂದಲ್ಲಿ ಡಿಕೋಪಾಲ್ 2.5 ಮಿ.ಲೀ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು ಹಾಗೆಯೇ – ಎಳೆ ಅಡಿಕೆ ರಸ ಹೀರುವ ತಿಗಣೆ ಹಾವಳಿ ಕಂಡು ಬಂದಲ್ಲಿ ಥೈಮಿಥೋಯೇಟ್ 1.75 ಅಥವಾ ಕ್ಲೋರೋಫೈರಿಫಾಸ್ 50 ಇಸಿ 1.5 ಅಥವಾ ಇಮಿಡಾಕ್ಲೋಪ್ರಿಡ್ 0.5 .ಮಿ .ಲೀ  ಯನ್ನು ಒಂದು ಲೀ ನೀರಿಗೆ ಬೆರೆಸಿ ದ್ರಾವಣವನ್ನು ತಂಪು ಹೊತ್ತಿನಲ್ಲಿ ಕೊನೆಗಳಿಗೆ ಸಿಂಪಡಿಸಬೇಕು. ಕಟ್ಟೆ ರೋಗ ಪೀಡಿತ ಬಾಳೆಗಳನ್ನು ಕಿತ್ತೆಸೆಯಬೇಕು.

ಕಾಳು ಮೆಣಸಿನ ಬಳ್ಳಿಗಳನ್ನು ಆಧಾರವಾಗಿ ಅಡಿಕೆ ಮರಗಳಿಗೆ ಕಟ್ಟಿ, ಬುಡಕ್ಕೆ ಮಣ್ಣೇರಿಸಿ ಕೊಡಬೇಕು. ಹಾಗೆಯೇ ನೆಲಕ್ಕೆ ಹಬ್ಬಿರುವ ಕುಡಿಗಳನ್ನು ಕತ್ತರಿಸಬೇಕು.ಮಾವು- ಗೇರು ಬೆಳೆಯ ನಂತರದಲ್ಲಿ ಅನಗತ್ಯ ಟೊಂಗೆಗಳನ್ನು ಕತ್ತರಿಸಿ, ಬೋರ್ಡ್ ಪೇಸ್ಟ್ ಹಚ್ಚಬೇಕು. ಮಳೆಗಾಲ ಪ್ರಾರಂಭಕ್ಕೂ ಮೊದಲು ಮಣ್ಣು ಪರೀಕ್ಷೆಯ ಆಧಾರದ ಮೇಲೆ ಸುಣ್ಣ ಹಾಕಿ, ಮಳೆ ಪ್ರಾರಂಭದಲ್ಲಿ ಬೆಳೆಗಳಿಗೆ ಶಿಫಾರತ್ತಾರ ಗೊಬ್ಬರ ಹಾಕಿ ಸಂರಕ್ಷಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ವಿಷಯ ತಜ್ಞರು ತೋಟಗಾರಿಕಾ ಇಲಾಖೆಯ ವಿ. ಎಂ. ಹೆಗಡೆ ಹಾರ್ಟಿ ಕ್ಲಿನಿಕ್, ಶಿರಸಿ ಅಥವಾ ಆಯಾ ತಾಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.