ಜಿಲ್ಲೆಯಲ್ಲಿ ಸಂಸದರನ್ನು ಬದಲಾಯಿಸುವ ಅಗತ್ಯತೆ ಜನತೆಗಿದೆ: ಮುಖ್ಯಮಂತ್ರಿ ಕುಮಾರಸ್ವಾಮಿ


ಕುಮಟಾ: ಅನಂತಕುಮಾರ ಹೆಗಡೆ ದೇಶಾಭಿಮಾನದ ಹೆಸರಿನಲ್ಲಿ ಅಮಾಯಕ ಯುವಕರನ್ನು ಬಲಿತೆಗೆದುಕೊಂಡು ತಮ್ಮ ರಾಜಕೀಯ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಕೀಳು ಅಭಿರುಚಿಯ ಸಂಸದರನ್ನು ಬದಲಾಯಿಸುವ ಅಗತ್ಯತೆ ಜಿಲ್ಲೆಯ ಜನತೆಗಿದೆ. ಕೋಮುಗಲಭೆ ಸೃಷ್ಟಿಸುವಂತಹ ಭಾಷಣ ಮಾಡುವವರಿಗೆ ಮತ ಹಾಕುವ ಬದಲು ಅಭಿವೃದ್ಧಿ ಕೆಲಸ ಮಾಡುವವರಿಗೆ ಮತಹಾಕಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆನಂದ ಅಸ್ನೋಟಿಕರ್ ಪರ ಮತಯಾಚಿಸಿದರು.

ಗುರುವಾರ ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜಿಸಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಾನು ಈ ಹಿಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರಕನ್ನಡ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮವಾಸ್ಥವ್ಯ ಕೈಗೊಳ್ಳುವ ಬಗೆಗೆ ಪ್ರಸ್ತಾಪ ಮಾಡಿದ್ದೆ. ಆದರೆ ಚುನಾವಣೆಯ ನಂತರ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂತು. ಅದೇ ಸಂದರ್ಭದಲ್ಲಿ ಬಿಜೆಪಿಗರು ಮುಖ್ಯಮಂತ್ರಿಯ ಆಸನಕ್ಕಾಗಿ ಅಪಪ್ರಚಾರದಂತಹ ಹಲವು ಸಮಸ್ಯೆಗಳನ್ನು ತಂದೊಡ್ಡಿದರು. ಆದರೆ ರೈತರ ಹಾಗೂ ರಾಜ್ಯದ ಹಲವು ಯುವಕರ ಸಮಸ್ಯೆಗೆ ಸ್ಪಂದಿಸದೇ ಸುಮ್ಮನೆ ಕುಳಿತಿಲ್ಲ. ನನ್ನ ಅಧಿಕಾರಾವಧಿಯಲ್ಲಿ ರಾಜ್ಯಾದ್ಯಂತ 16 ಲಕ್ಷ ರೈತ ಕುಟುಂಬದ ಸಾಲಮನ್ನಾ ಮಾಡಿದ್ದೇನೆ. ಉತ್ತರಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 181 ಕೋಟಿ ರೂ.ಗಳಲ್ಲಿ 46.000 ಕುಟುಂಬದ ಸಾಲಮನ್ನಾ ಮಾಡಲಾಗಿದೆ ಎಂದರು.

ಭಟ್ಕಳದ ಡಾ.ಚಿತ್ತರಂಜನ್, ತಿಮ್ಮಪ್ಪ ನಾಯ್ಕ ಇವರ ಸಾವಿಗೆ ನ್ಯಾಯ ದೊರೆತಿಲ್ಲ. ಆರೋಪಿಗಳ ಪತ್ತೆಯಾಗಿಲ್ಲ. ಪರೇಶ ಮೇಸ್ತಾ ಸಾವನ್ನು ಸಿಬಿಐಗೆ ಒಪ್ಪಿಸಿದರೂ ಇತ್ಯರ್ಥವಾಗಿಲ್ಲ. ಈ 3 ಸಾವಿಗೂ ನ್ಯಾಯ ದೊರೆಯುವುದಿಲ್ಲ. ಆದರೆ ಬಿಜೆಪಿ ಪಕ್ಷ ಇವರ ಸಾವನ್ನು ಬಂಡವಾಳವನ್ನಾಗಿಸಿಕೊಂಡಿದೆ. ಇವೆಲ್ಲ ಸಮಸ್ಯೆ ಇತ್ಯರ್ಥವಾಗಬೇಕಾದರೆ ಕೆನರಾ ಲೋಕಸಭಾ ಕ್ಷೇತ್ರದಿಂದ ಆನಂದ ಅಸ್ನೋಟಿಕರ್ ಅವರನ್ನು ಬಹುಮತದಿಂದ ಗೆಲ್ಲಿಸಿ ಎಂದು ವಿನಂತಿಸಿಕೊಂಡರು.

ಕೆನರಾ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಮಾತನಾಡಿ, ಯುವಕರ ಕೈಗೆ ಕತ್ತಿ ಕೊಟ್ಟು ಅವರ ಜೀವನವನ್ನು ಹಾಳು ಮಾಡುವುದರ ಬದಲಿಗೆ ಅವರು ಸ್ವಂತ ನೆಲದಲ್ಲಿ ನಿಂತು ಉದ್ಯೋಗ ಮಾಡುವಂತಾಗಬೇಕು. ಕೆಂಪು ಶಾಲು ಹಾಕಿಕೊಂಡು ಹಣೆಯ ಮೇಲೆ ನಾಮವನ್ನು ಇಟ್ಟುಕೊಂಡರೆ ಹಿಂದೂ ಧರ್ಮದ ರಕ್ಷಣೆ ಆಗುವುದಿಲ್ಲ. ಸೀಬರ್ಡ್ ಹಾಗೂ ಕೈಗಾ ಪ್ರದೇಶಗಳಲ್ಲಿ ಸ್ಥಳೀಯ ಸಾವಿರಾರು ಯುವಕರಿಗೆ ಉದ್ಯೋಗವನ್ನು ದೊರಕಿಸಿಕೊಡುವ ಮೂಲಕ ಆ ಯುವಕರ ಕುಟುಂಬಕ್ಕೆ ನೆರವಾದರೆ ಹಿಂದೂ ಧರ್ಮದ ರಕ್ಷಣೆಯಾಗುತ್ತದೆ ಎಂದರು.

ಜಿಲ್ಲೆಯು ಸಾಕಷ್ಟು ಹಿಂದುಳಿದಿದ್ದು, ಕೈಗಾರಿಕೆಗಳಿಲ್ಲ. ಅತಿಕ್ರಮಣ ಸಮಸ್ಯೆ ಜನರನ್ನು ಕಾಡುತ್ತಿದೆ. ಕುಡಿಯಲು ನೀರಿಲ್ಲ. ಅಂಕೋಲಾ-ಹುಬ್ಬಳ್ಳಿ ರೈಲ್ವೆ, ತಾಳಗುಪ್ಪಾ-ಸಿದ್ಧಾಪುರ ರೈಲ್ವೆ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ವಿಮಾನ ನಿಲ್ದಾಣ ಹೀಗೆ ನೂರಾರು ಅಭಿವೃದ್ಧಿಗಳು ಆಗಬೇಕಿದೆ. 25 ವರ್ಷಗಳಿಂದ ಯುವಕರ ರಕ್ತವನ್ನು ಹೀರುತ್ತಿರುವ ಸಂಸದ ಅನಂತಕುಮಾರ ಹೆಗಡೆಯವರನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ. ಮೋದಿಯ ಫೋಟೋವೊಂದಿದ್ದರೆ ನಾನು ಗೆದ್ದು ಬರುತ್ತೇನೆ. ನನಗೆ ಮತ್ತೇನೂ ಬೇಡ ಎನ್ನುತ್ತಿರುವ ಸಂಸದ ಅನಂತಕುಮಾರಗೆ ಬಿಜೆಪಿ ಕಾರ್ಯಕರ್ತರೂ ಬೇಡವಾಗಿದ್ದಾರೆ. ಹಿಂದೂ ಧರ್ಮದ ಹೆಸರಿನಲ್ಲಿ ವಾತಾವರಣವನ್ನು ಕಲುಷಿತಗೊಳಿಸುತ್ತಿರುವ ಸಂಸದರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕಿದೆ. 5 ಬಾರಿ ಆಯ್ಕೆಯಾದ ಸಂಸದರು ಜಿಲ್ಲೆಗಾಗಿ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಮಾತನಾಡಿ, ನಾನು ಅಭಿವೃದ್ಧಿ ಮಾಡಲು ಬಂದಿಲ್ಲ. ರಾಜಕೀಯವನ್ನೇ ಮಾಡಲು ಬಂದಿದ್ದೇನೆ ಎನ್ನುವ ಸಂಸದರಿಗೆ ಇನ್ನೂವರೆಗೂ ನಮ್ಮ ಜಿಲ್ಲೆಯ ಜನರು ಮತ ಹಾಕುತ್ತ ಬಂದಿದ್ದಾರೆ. ಜಿಲ್ಲೆಯ ಜನರು ಈಗಲೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಖಾರ್ಲೆಂಡ್ ಸಮಸ್ಯೆಯಿಂದಾಗಿ ಉಪ್ಪು ನೀರು ಹೊಲಗದ್ದೆಗಳಿಗೆ ನುಗ್ಗಿ ಹೊಲಗಳು ಹಾಳಾಗುತ್ತಿವೆ. ಇಂತಹ ಸಮಸ್ಯೆಗಳ ಬಗ್ಗೆ ಲಕ್ಷ್ಯವಿಲ್ಲದ ಸಂಸದರು ನಮ್ಮ ಜಿಲ್ಲೆಗೆ ಬೇಕೆ ಎಂದು ಪ್ರಶ್ನಿಸಿದ ಅವರು, ಈ ಸಲವಾದರೂ ಅವರನ್ನು ಸೋಲಿಸಿ, ಜೆ.ಡಿ.ಎಸ್-ಕಾಂಗ್ರೆಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರನ್ನು ಗೆಲ್ಲಿಸಿ ಎಂದರು.

ಮಾಜಿ ಸಚಿವ ಬಸವರಾಜ್ ಹೊರಟ್ಟಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಈ ಹಿಂದೆ ಜೆಡಿಎಸ್ ಪಕ್ಷದ ಮೇಲೆ ಆರೋಪ ಮಾಡಿದ ಘಟನೆಗಳೂ ಇವೆ. ಇದು ರಾಜಕೀಯದಲ್ಲಿ ಸಾಮಾನ್ಯವಾಗಿದ್ದು, ಮೈತ್ರಿ ಸರಕಾರ ಬಂದ ಮೇಲೆ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಕೆನರಾ ಲೋಕಸಭಾ ಕ್ಷೇತ್ರದಲ್ಲಿಯೂ ಸಹಿತ ಎರಡೂ ಪಕ್ಷಗಳು ಒಟ್ಟಾಗಿ ಪ್ರಚಾರ ಕಾರ್ಯವನ್ನು ಮುಂದುವರೆಸಿದೆ. ಹೀಗಾಗಿ ಏನೂ ಕೆಲಸ ಮಾಡದ ಸಂಸದ ಅನಂತಕುಮಾರ ಹೆಗಡೆ ಈ ಸಲ ಸೋಲುವುದರಲ್ಲಿ ಎರಡು ಮಾತಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ಹಾಗೂ ಅಭಿವೃದ್ಧಿಯನ್ನು ನಿರೀಕ್ಷಿಸುವುದಾದರೆ ಸಂಸದ ಅನಂತಕುಮಾರ ಹೆಗಡೆ ಅವರನ್ನು ಈ ಚುನಾವಣೆಯಲ್ಲಿ ಸೋಲಿಸಲೇಬೇಕಿದೆ. ಜೀವದ ಹಂಗನ್ನು ತೊರೆದು ಅನೇಕ ಹೋರಾಟದಲ್ಲಿ ನಾವು ಭಾಗವಹಿಸಿದ್ದೆವು. ಹಿಂದೂ ಧರ್ಮದ ರಕ್ಷಣೆಗೆ ನಿಂತಿರುವ ಅನಂತಕುಮಾರ ನಮ್ಮ ನಾಯಕರೆಂದು ಭಾವಿಸಿದ್ದೆವು. ಸತ್ಯ-ಧರ್ಮದ ರಕ್ಷಣೆ ಅವರಿಂದಲೇ ಆಗುತ್ತಿದೆ ಎಂಬ ಭಾವನೆಯಿತ್ತು. ಆದರೆ ಅದೆಲ್ಲವೂ ಸಂಪೂರ್ಣ ಸುಳ್ಳೆಂದು ಈಗ ಅರಿವಾಗಿದೆ. ಇವರ ಮಾತನ್ನು ಕೇಳಿ ಹೋರಾಟದಲ್ಲಿ ಭಾಗವಹಿಸಿದ 300 ಯುವಕರ ಮೇಲೆ ಪ್ರಕರಣ ದಾಖಲಾಗಿದ್ದು, ಇಂದು ನ್ಯಾಯಾಲಯಕ್ಕೆ ಓಡಾಡುತ್ತಿದ್ದೇವೆ. ಆದರೆ ಅನಂತಕುಮಾರ ಹೆಗಡೆ ಯಾರೊಬ್ಬರನ್ನೂ ನೋಡಲು ಬರಲಿಲ್ಲ. ಯೋಗಕ್ಷೇಮವನ್ನೂ ವಿಚಾರಿಸಲಿಲ್ಲ. ಹೋರಾಟದಲ್ಲಿ ಒಂದೊಮ್ಮೆ ನಮ್ಮ ಜೀವ ಹೋದರೆ ನಮ್ಮ ಸಾವಿಗೆ ನ್ಯಾಯ ಸಿಗುವುದಿಲ್ಲ. ಬದಲಿಗೆ ನಮ್ಮ ಹಣದ ಮೇಲೆಯೇ ಇವರು ರಾಜಕೀಯ ಮಾಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಬಿ.ಎಲ್.ಕೋನರೆಡ್ಡಿ, ಮಾಜಿ ಶಾಸಕ ಕೆ.ಎಚ್.ಗೌಡ, ಮಾಜಿ ಸಚಿವ ಆರ್.ಎನ್.ನಾಯಕ, ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ಗಣಪಯ್ಯ ಗೌಡ, ಶಂಭು ಗೌಡ, ಜಿಲ್ಲಾ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ವಿಜಯಾ ಪಟಗಾರ, ಸುಜಾತಾ ಗಾಂವಕರ್, ಗಜು ನಾಯ್ಕ ಅಳ್ವೆಕೋಡಿ, ಮಂಜುನಾಥ ಪಟಗಾರ, ಭಾಸ್ಕರ ಪಟಗಾರ, ಜೆ.ಎನ್.ಗೌಡ, ಜಿ.ಕೆ.ಪಟಗಾರ, ವಿ.ಎಲ್.ನಾಯ್ಕ, ಹೊನ್ನಪ್ಪ ನಾಯಕ ಹಾಗೂ ಇತರರು ಹಾಜರಿದ್ದರು. ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಆರ್.ಎಚ್.ನಾಯ್ಕ ಸ್ವಾಗತಿಸಿದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.