ಏ.19ಕ್ಕೆ ಮಂಜುಗುಣಿ ಶ್ರೀ ವೆಂಕಟರಮಣ ದೇವರ ವಾರ್ಷಿಕ ಶ್ರೀಮನ್ಮಹಾರಥೋತ್ಸವ

ಶಿರಸಿ: ಕರ್ನಾಟಕದ ತಿರುಪತಿ ಖ್ಯಾತಿಯ ಪುಣ್ಯ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವರ ವಾರ್ಷಿಕ ಶ್ರೀಮನ್ಮಹಾರಥೋತ್ಸವ ರಾಯಸ ನಿರೂಪ ಏ.19ರ ಶುಕ್ರವಾರ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ದೇವರ ದರ್ಶನಕ್ಕೆ ಆಗಮಿಸಲಿರುವ ಲಕ್ಷಾಂತರ ಭಕ್ತಾಧಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದ ಅತಿ ದೊಡ್ಡ ಮಹಾರಥಗಳ ಪೈಕಿ ಅಗ್ರಮಾನ್ಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ 69ಅಡಿ ಎತ್ತರದ, ಆರು ಬೃಹತ್ ಗಾಲಿಗಳುಳ್ಳ ಮಂಜುಗುಣಿಯ ಶ್ರೀ ಬ್ರಹ್ಮರಥದಲ್ಲಿ ಮುಂಜಾನೆ 6ಗಂಟೆಗೆ ಪದ್ಮಾವತಿ ಹಾಗೂ ಲಕ್ಷ್ಮೀ ದೇವಿಯರ ಸಮೇತ ವೆಂಕಟರಮಣ ದೇವರ ಉತ್ಸವ ಮೂರ್ತಿಗಳನ್ನು ಬೆಳ್ಳಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ತಡರಾತ್ರಿ ಒಂದು ಗಂಟೆಗೆ ರಥನಯನ ಕಾರ್ಯಕ್ರಮ ಜರುಗಲಿದೆ.

ದೇವಸ್ಥಾನದ ರಥಬೀದಿಯ ಆವಾರದಲ್ಲಿ ಕಿ.ಮೀ ಅಂತರದಲ್ಲಿ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಗಂಟೆಗೂ ಅಧಿಕ ಕಾಲ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತಾಧಿಗಳ ಅನುಕೂಲಕ್ಕಾಗಿ ಬಿಸಿಲ ಧಗೆಯನ್ನು ತಪ್ಪಿಸಲೆಂದು ಪೆಂಡಾಲ್ ಹಾಗೂ ನೀರಿನಿಂದ ಒದ್ದೆ ಮಾಡಲಾದ ಮ್ಯಾಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತಾಧಿಗಳ ಬಾಯಾರಿಕೆ ನೀಗಿಸಲೆಂದು ರಥಬೀದಿಯಲ್ಲಿ ಕುಡಿಯುವ ನೀರಿನ ಪೂರೈಕೆ ಹಾಗೂ ದೇವಸ್ಥಾನದ ಒಳ ಆವಾರದಲ್ಲಿ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿದೆ.

ಮಹಾರಥೋತ್ಸವದಂದು: ಏ.19 ರಂದು ಪ್ರಾತಃ ಮಹಾರಥಶುದ್ಧಿ, ರಥಪೂಜಾ, ರಥಬಲಿ, ರಥಾಗಮನ, ರಥಾರೋಹಣ, ಪೂಜಾ ಪ್ರಾರ್ಥನ ಸಾಂಕೇತಿಕ ರಥನಯನದ ನಂತರದಲ್ಲಿ ಸಾರ್ವತ್ರಿಕವಾಗಿ ಭಕ್ತರಿಗೆ ಶ್ರೀ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಯಲ್ಲಿ ಫಲ ಸಮರ್ಪಣೆ ಕಾರ್ಯ ನಡೆಯಲಿದೆ. ಮುಂಜಾನೆಯಿಂದ ರಾತ್ರಿ 12 ಗಂಟೆಯವರೆಗೆ ಸಾರ್ವತ್ರಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ತದನಂತರದಲ್ಲಿ ಮರ್ಯಾದೆ ಕಾಯಿ ಹಂಚಿಕೆ, ಫಲತಾಡನ, ಪೂಜೆ, 1 ಗಂಟೆಗೆ ರಥನಯನ, ರಥಾವರೋಹಣ ಹಾಗೂ ಪಾನಕ ನೈವೇದ್ಯ ಧಾರ್ಮಿಕ ಕಾರ್ಯಕ್ರಮಗಳು ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ನೇತೃತ್ವದಲ್ಲಿ ಜರುಗಲಿದೆ. ಏ.20 ರ ಮಧ್ಯಾಹ್ನ ವಸಂತಪೂಜಾ ಸಂವಾದ, ಕಲಹ, ಅಂಕುರ ಸಮರ್ಪಣ, ಪೂಜಾ ಪ್ರಸಾದ ವಿತರಣೆ, ಅವಭೃತ ತೀರ್ಥ ಸ್ನಾನ, ಪೂರ್ಣಾಹುತಿ, ಧ್ವಜಾವರೋಹಣ ಕಾರ್ಯಕ್ರಮ ನಡೆಯಲಿದೆ.

ಸ್ವಚ್ಛತೆಗೆ ಆದ್ಯತೆ: ಮಹಾರಥೋತ್ಸವ ಅಂಗವಾಗಿ ಇನ್ನೂರಕ್ಕು ಹೆಚ್ಚು ಅಂಗಡಿ ಮುಂಗಟ್ಟುಗಳು ಮಂಜುಗುಣಿ ರಥಬೀದಿಯಲ್ಲಿ 2 ದಿನಗಳಿಂದ ನೆಲೆ ನಿಲ್ಲಲಿದೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಿರುವದರಿಂದ ಮಹಾರಥೋತ್ಸವವು ಇತರರಿಗೆ ಮಾದರಿಯಾಗಬೇಕೆಂಬ ಕಲ್ಪನೆಯಲ್ಲಿ ಹಾಗೂ ಪುಣ್ಯ ಕ್ಷೇತ್ರದ ಸ್ವಚ್ಛತೆಗೆ ಆದ್ಯತೆ ನೀಡುವ ದೃಷ್ಟಿಯಲ್ಲಿ ಐಸ್‍ಕ್ರೀಮ್ ಅಂಗಡಿಗಳು ಹಾಗೂ ರಥಬೀದಿಯ ಅಲ್ಲಲ್ಲಿ ಕಸದ ಬುಟ್ಟಿಗಳನ್ನಿಟ್ಟು ನೆಲಕ್ಕೆ ಕಸ ಚೆಲ್ಲದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲೆಂದೆ ಪ್ರತ್ಯೇಕ ಕಾರ್ಯಕರ್ತರನ್ನು ನೇಮಿಸಲಾಗಿದೆ.

300ಕ್ಕೂ ಹೆಚ್ಚು ಕಾರ್ಯಕರ್ತರು: ಮಂಜುಗುಣಿ ವೆಂಕಟರಮಣ ದೇವರ ಮಹಾರಥೋತ್ಸವದಲ್ಲಿ ಸ್ಥಳಿಯ ಗ್ರಾಮಗಳ 300ಕ್ಕೂ ಹೆಚ್ಚು ಕಾರ್ಯಕರ್ತರು ಕಳೆದೊಂದು ವಾರದಿಂದ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ರಥೋತ್ಸವ ಅಂಗವಾಗಿ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೊದಲೆ 20 ಸಮಿತಿಗಳನ್ನು ರಚನೆ ಮಾಡಿಕೊಂಡು ಪ್ರಸಾದ ಪ್ಯಾಕಿಂಗ್, ವಾಹನ ನಿಲುಗಡೆ, ಕಾರ್ಯಾಲಯ, ಗೋ ಕಾಣಿಕೆ ಸೇರಿದಂತೆ ಇನ್ನಿತರ ಸಮಿತಿಗಳಲ್ಲಿ ಸ್ಥಳಿಯ ಜನತೆ ಸೇವೆಯಲ್ಲಿ ತೊಡಗಿಕೊಂಡಿದೆ.

ಸಾರ್ವಜನಿಕ ಸ್ವಚ್ಛತಾ ಸೇವೆ..! ಮಂಜುಗುಣಿಯ ಮಹಾರಥೋತ್ಸವದಂದು ಶ್ರೀ ದೇವರಿಗೆ ನಾನಾ ಬಗೆಯಲ್ಲಿ ಸೇವೆ ಸಲ್ಲಿಸಿ ಕೃತಾರ್ಥರಾಗುವ ಭಕ್ತಾಧಿಗಳಿಗೆ ಸ್ವಚ್ಛತಾ ಸೇವೆಗೆ ಅವಕಾಶ ಮಾಡಿಕೊಡುವ ಮೂಲಕ ಮಂಜುಗುಣಿ ದೇವಸ್ಥಾನ ಮಾದರಿ ಕಾರ್ಯ ಆರಂಭಿಸಿದೆ. ಶ್ರೀ ವೆಂಕಟರಮಣ ದೇವರ ಬ್ರಹ್ಮರಥೋತ್ಸವದ ರಥನಯನ ಕಾರ್ಯಕ್ರಮದ ನಂತರದಲ್ಲಿ (ತಡರಾತ್ರಿ 2 ಗಂಟೆ) ರಥೋತ್ಸವದಲ್ಲಿ ಸಾರ್ವಜನಿಕ ಸ್ವಚ್ಛತಾ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಥೋತ್ಸವದಲ್ಲಿ ಪಾಲ್ಗೊಂಡ ಆಸಕ್ತ ಭಕ್ತಾಧಿಗಳು, ಸಾರ್ವಜನಿಕರು ಸ್ವಚ್ಛತೆಯ ಸೇವೆಯನ್ನು ಶ್ರೀ ದೇವರಿಗೆ ಸಲ್ಲಿಸಬಹುದಾಗಿದೆ.

ಚೈತ್ರ ಶುದ್ಧ ಚತುರ್ದಶಿಯ ಗುರುವಾರ ಶ್ರೀ ದೇವರ ವರ್ಧಂತಿ ಉತ್ಸವ, ಪ್ರಾತಃ ಭಾಂಡ ಪೂಜಾ, ಪಾಕಸಿದ್ಧಿ, ಅನ್ನ ಸಂಗ್ರಹ,ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ವರ್ಧಂತಿ, ಮಹಾಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ಕ್ಷೇತ್ರಪ್ರಾಕಾರ ಬಲಿ, ಧ್ವಜಪ್ರಾರ್ಥನಾ, ಮಹಾ ದಂಡಬಲಿ,ವಿಶೇಷ ಭೂತರಾಜಬಲಿ, ಗರುಡಯಂತ್ರೋತ್ಸವ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. – ಶ್ರೀನಿವಾಸ ಭಟ್ಟ, ಪ್ರಧಾನ ಅರ್ಚಕರು, ಮಂಜುಗುಣಿ

Categories: ಜಿಲ್ಲಾ ಸುದ್ದಿ

Leave A Reply

Your email address will not be published.