ಅಭಿವೃದ್ಧಿ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಬಂದಷ್ಟು ಹಣ ಬೇರಾವ ಸರ್ಕಾರದಲ್ಲೂ ಬಂದಿಲ್ಲ: ಸಚಿವ ಆರ‍್ವಿಡಿ


ಕುಮಟಾ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಅಭಿವೃದ್ಧಿಗೆ ಹರಿದಷ್ಟು ಹಣ ಬೇರೆ ಯಾವ ಸರ್ಕಾರವಿದ್ದಾಗಲೂ ಬಂದಿಲ್ಲ. ಕರಾವಳಿ ಭಾಗದಲ್ಲಿದ್ದ ನಮ್ಮ ಪಕ್ಷದ ಶಾಸಕರು ಕೋಟ್ಯಾಂತರ ರೂಪಾಯಿಗಳ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಆದರೆ ಪರೇಶ ಮೆಸ್ತಾನ ಸಾವು ನಮ್ಮ ಪಕ್ಷದ ಕರಾವಳಿ ಭಾಗದ ಶಾಸಕರೆಲ್ಲರನ್ನೂ ಸೋಲುವಂತೆ ಮಾಡುವುದರ ಮೂಲಕ ನಾವು ಮಾಡಿದ ಅಭಿವೃದ್ದಿ ಕಾರ್ಯಗಳನ್ನೆಲ್ಲ ನುಂಗಿ ಹಾಕಿತು. ಈ ಸೋಲನ್ನ ನೀಡಲು ನಾವು ಮಾಡಿದ ಪಾಪವಾದರೂ ಏನು ಎಂದು ಸಚಿವ ಆರ್.ವಿ.ದೇಶಪಾಂಡೆ ಪ್ರಶ್ನಿಸಿದರು.

ಇಲ್ಲಿನ ನಾಮಧಾರಿ ಸಭಾಭವನದಲ್ಲಿ ಬುಧವಾರ ಆಯೋಜಿಸಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿಪಕ್ಷದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಬಂದಾಗಲೆಲ್ಲ ರೈತರ ಸಮಸ್ಯೆ ನಿವಾರಣೆಯಾಗಿದೆ. ೨೦೧೨ರಲ್ಲಿ ದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ನಿರುದ್ಯೋಗ ಪ್ರಮಾಣ ಶೇ.೨.೧೨ ಇತ್ತು. ಈಗ ಅದು ೬.೧೧ಕ್ಕೆ ಏರಿಕೆ ಕಂಡಿರುವುದು ದುರ್ದೈವದ ಸಂಗತಿ. ಈ ಪರಿಸ್ಥಿತಿ ನಿವಾರಣೆಯಾಗಬೇಕಾದರೆ ಕೇಂದ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಶ್ಯವಿದೆ ಎಂದರು.

ಸುಳ್ಳು ಸುದ್ದಿ ಹಬ್ಬಿಸುವುದು ಪ್ರಜಾಪ್ರಭುತ್ವವಲ್ಲ. ಈಗ ನಡೆಯುವ ಚುನಾವಣೆ ಮಹತ್ವದ ಚುನಾವಣೆಯಾಗಿದ್ದು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳು ಯಾವ ಪಕ್ಷದಿಂದ ಅಭಿವೃದ್ಧಿ ಕಂಡಿವೆ ಎಂಬುದರ ಕುರಿತು ಮತದಾರರು ಯೋಚಿಸಿ ಮತದಾನ ಮಾಡಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷ ೨೧-೨೨ ಸ್ಥಾನದಲ್ಲಿ ಗೆಲ್ಲಲಿದೆ. ಅರಣ್ಯ ಅತಿಕ್ರಮಣದಾರರ ವಿಷಯದಲ್ಲಿ ಇತರ ವರ್ಗದವರಿಗೆ ನ್ಯಾಯ ಕೊಡಿಸುವಲ್ಲಿ ನಾನು ಸೋತು ಹೋಗಿದ್ದೇನೆ. ಇತರ ವರ್ಗದವರಿಗೆ ನ್ಯಾಯ ಸಿಗಬೇಕಾದರೆ ಈಗಿರುವ ಅರಣ್ಯ ಕಾಯ್ದೆ ತಿದ್ದುಪಡಿಯಾಗಬೇಕು. ಕೇಂದ್ರದಲ್ಲಿ ನಮ್ಮ ಪಕ್ಷದ ಸರ್ಕಾರ ಬಂದಾಕ್ಷಣ ಈ ಅರಣ್ಯಕಾಯ್ದೆ ತಿದ್ದುಪಡಿ ಮಾಡಿಸಲಾಗುವುದು ಎಂದು ಅವರು ಭರವಸೆ ನೀಡುತ್ತ, ಈ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾದ ಅನಂದ ಅಸ್ನೋಟಿಕರ್‌ಗೆ ಎಲ್ಲರೂ ಮತ ನೀಡಿ ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರನ್ನು ಕೋರಿಕೊಂಡರು.

ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿಮಾತನಾಡಿ, ಅನಂತಕುಮಾರ ಹೆಗಡೆ ಸಂಸದರಾಗಿ ಮಾಡಿದ ಕಾರ್ಯ ಶೂನ್ಯ. ಆದರೆ ಭಾಷಣದಲ್ಲಿ ಅವರಿಗೆ ಪ್ರಥಮ ಸ್ಥಾನ ನೀಡಬೇಕು. ವೈದ್ಯರು, ಸಾಹಿತಿಗಳು, ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದಾಗಿ ಅನಂತಕುಮಾರ ಹೆಗಡೆ ಸಚಿವರಾದಾಗ ಪ್ರಮಾಣ ವಚನ ಸ್ವೀಕರಿಸಿರಬೇಕಾಗಿತ್ತು ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಗಳ ಕಾರ್ಯದರ್ಶಿ, ಜೆಡಿಎಸ್ ಮುಖಂಡ ಕೋನರೆಡ್ಡಿ ಮಾತನಾಡಿ, ಈ ಸಲದ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮತದಾರರು ಬದಲಾವಣೆಯ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದ ಯಾವ ಬಿಜೆಪಿಯ ಮುಖಂಡರ ಮನೆಯಲ್ಲೂ ಐಟಿ ದಾಳಿಯಾಗಲಿಲ್ಲ. ಆದರೆ ಕೆನರಾ ಲೋಕಸಭಾ ಕ್ಷೇತ್ರದ ಕೆಲವೆಡೆಗಳಲ್ಲಿ ಬಿಜೆಪಿಯವರ ಮನೆಮೇಲೆ ಐಟಿದಾಳಿಯಾಗಿದೆ ಎಂದಾದರೆ ಅದು ಪ್ರದರ್ಶನಕ್ಕಾಗಿ ಬಿಜೆಪಿಯವರೇ ಮಾಡಿಸಿದ್ದು ಎಂದರು.

ಅಭ್ಯರ್ಥಿ ಆನಂದ ಅಸ್ನೋಟಿಕರ್ ಮಾತನಾಡಿ, ಈ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡುವುದರ ಮೂಲಕ ನಿಮ್ಮ ಸೇವೆಗೆ ಒಂದು ಅವಕಾಶ ನೀಡಿ ಎಂದು ಕೋರಿಕೊಂಡರು.

ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ನಿವೇದಿತ ಆಳ್ವಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಮಂಕಾಳು ವೈದ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್ ನಾಯ್ಕ, ಮುಖಂಡ ಸೂರಜ ನಾಯ್ಕ ಸೋನಿ, ರತ್ನಾಕರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ. ಎಲ್. ನಾಯ್ಕ, ಜಗದೀಪ ತೆಂಗೇರಿ, ಮಂಜುನಾಥ ಭಂಡಾರಿ ಸೇರಿದಂತೆ ಇನ್ನಿತರರು ಇದ್ದರು. ವಿ ಎಲ್ ನಾಯ್ಕ ಸ್ವಾಗತಿಸಿದರು. ಸಚಿನ್ ನಾಯ್ಕ ನಿರೂಪಿಸಿ, ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.