ಆನಂದ- ಅನಂತರನ್ನು ಚುನಾವಣೆಯಿಂದ ತಿರಸ್ಕರಿಸಬೇಕು: ಮಂಜುನಾಥ ನಾಯ್ಕ


ಕುಮಟಾ: ಜಿಲ್ಲೆಯ ಜನ ಹಿಂದುಳಿದವರಿಗೆ ಮಾರಕವಾಗಿರುವ ಆನಂದ ಅಸ್ನೋಟಿಕರ್ ಹಾಗೂ ಅಭಿವೃದ್ಧಿ ಕಾರ್ಯಮಾಡದ ಅನಂತಕುಮಾರ ಹೆಗಡೆ ಅವರನ್ನು ತಿರಸ್ಕರಿಸಬೇಕು. ಜಿಲ್ಲೆಯಲ್ಲಿ ಹಿಂದುಳಿದವರು, ಮುಂದುವರೆದವರು ಎಂದು ಪ್ರಚೋದನೆ ನೀಡುವ ಮೂಲಕ ಯಾರೂ ರಾಜಕಾರಣ ಮಾಡಿದ ಇತಿಹಾಸವೇ ಇಲ್ಲ. ಆದರೆ ಆನಂದ ಅಸ್ನೋಟಿಕರ್ ವರ್ಗ ಸಂಘರ್ಷಕ್ಕೆ ನಾಂದಿ ಹಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಫರ್ಧಿಸಿರುವ ಸ್ವತಂತ್ರ ಅಭ್ಯರ್ಥಿಗಳ ಬಗ್ಗೆ ತಿಳಿದು ಅವರನ್ನು ಬೆಂಬಲಿಸಬೇಕು ಎಂದು ನಾಮಧಾರಿ ಸಮಾಜದ ಹಾಗೂ ಜೆಡಿಎಸ್ ಮುಖಂಡ ಮಂಜುನಾಥ ನಾಯ್ಕ ಕೋರಿದರು.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಣಕೋಣ ಪ್ರಕರಣ ನಡೆದಾಗ ಅನೇಕ ಹಿಂದುಳಿದವರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯಿತು. ಆಗ ಆನಂದಗೆ ಹಿಂದುಳಿದವರ ಬಗ್ಗೆ ಇರುವ ಕಾಳಜಿ ಏನಾಗಿತ್ತು ಎಂದು ಪ್ರಶ್ನಿಸಿದ ಅವರು, ಲೋಕಸಭಾ ಚುನಾವಣೆ ಹಿಂದುಳಿದವರ ಸಂಘಕ್ಕೆ ನಡೆಯುವ ಚುನಾವಣೆಯಲ್ಲ. ಇವರಿಗೆ ಹಿಂದುಳಿದವರ ಬಗ್ಗೆ ಕಾಳಜಿ ಎಂಬುದು ನಾಟಕವಾಗಿದೆ. ಆನಂದ ಅಸ್ನೋಟಿಕರ್ ಲೋಕಸಭಾ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯಲ್ಲ. ಇದು ಜಿಲ್ಲೆಯ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಆಯ್ಕೆಯೂ ಅಲ್ಲ. ಬಿಜೆಪಿಯವರು ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಆನಂದ ಹಿಂದುಳಿದವರು, ಬ್ರಾಹ್ಮಣರು ಎಂದು ವರ್ಗ ಸಂಘರ್ಷ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಜಿಲ್ಲೆಯಲ್ಲಿ ಹಿಂದುಳಿದವರು, ದಲಿತರು, ಬ್ರಾಹ್ಮಣರು ಒಬ್ಬರಿಗೊಬ್ಬರು ಸಹಕಾರ, ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಆನಂದ ಅವರಿಗೆ ಹಿಂದುಳಿದವರ ಬಗ್ಗೆ ಕಾಳಜಿ ಇದ್ದಿದ್ದರೆ, ಜಿಲ್ಲೆಯ ನಾಮಧಾರಿ, ಮರಾಠಾ, ಹಾಲಕ್ಕಿ, ಮೀನುಗಾರರು, ಗ್ರಾಮ ಒಕ್ಕಲಿಗರು, ಅಥವಾ ಅಲ್ಪ ಸಂಖ್ಯಾತರು ಅಥವಾ ಇನ್ನುಳಿದ ಹಿಂದುಳಿದವರನ್ನು ಅಭ್ಯರ್ಥಿಯನ್ನಾಗಿ ಮಾಡುವಲ್ಲಿ ತಮ್ಮ ಕಾಳಜಿಯನ್ನು ತೋರಿಸಬೇಕಾಗಿತ್ತು. ಅವರ ಪರವಾಗಿ ಒಂದಾದರೂ ಕೆಲಸ ಮಾಡಿದ್ದಲ್ಲಿ ಅವರ ಹಿಂದುಳಿದವರ ಕಾಳಜಿ ಒಪ್ಪಬಹುದಿತ್ತು ಎಂದರು.

ಮುಸಲ್ಮಾನರು ಎಸ್.ಎಸ್.ಎಲ್.ಸಿ ಫೇಲಾದರೂ ದುಬೈ ಮತ್ತು ಇತರ ಕಡೆಗೆ ಕೆಲಸಕ್ಕೆ ಹೋಗುತ್ತಾರೆ. ಬ್ರಾಹ್ಮಣರು ಹೆಚ್ಚಿಗೆ ಕಲಿತು ಅಮೇರಿಕಾ, ಇಂಗ್ಲೇಂಡಿಗೆ ಹೋಗುತ್ತಾರೆ ಎಂದು ಜಿಲ್ಲೆಯಲ್ಲಿ ವರ್ಗ ಸಂಗರ್ಷಕ್ಕೆ ಕಿಚ್ಚು ಹಚ್ಚುತ್ತಿದ್ದಾರೆ. ಜಿಲ್ಲೆಯ ಹಿಂದುಳಿದ ವರ್ಗಕ್ಕೆ ತಾನೇ ನಾಯಕ ಎನ್ನುವ ರೀತಿಯಲ್ಲಿ ಆನಂದ ಮಾತನಾಡುತ್ತಿದ್ದಾರೆ. ದೇಶಪಾಂಡೆಯವರು ಈ ಜಿಲ್ಲೆಯ ಒಬ್ಬ ಅನುಭವಿ ಹಾಗೂ ಹಿರಿಯ ರಾಜಕಾರಣಿ. ರಾಜಕೀಯವಾಗಿ ಹಾಗೂ ಕೆಲವು ಸಿದ್ಧಾಂತಗಳ ಮೇಲೆ ಅವರನ್ನು ವಿರೋಧಿಸಬಹುದು. ಆದರೆ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದರೂ ದೇಶಪಾಂಡೆಯವರಿಗೆ ವಯಸ್ಸಾಯಿತು, ಅಧಿಕಾರ ಬಿಡಿ ಎಂದು ಹೇಳಿದ್ದು ಅವರ ಉದ್ಧಟತನವನ್ನು ಎತ್ತಿ ತೋರಿಸುತ್ತದೆ. ಈ ರೀತಿ ಉದ್ಧಟತನದ ಮಾತನಾಡುವ ಆನಂದ ಮುಂದೊಂದು ದಿನ ದೇವೇಗೌಡರಿಗೂ ವಯಸ್ಸಾಯಿತು ಅಧಿಕಾರ ಬಿಡಿ ಎಂಬುವುದರಲ್ಲಿ ಸಂಶಯವಿಲ್ಲ ಎಂದರು.

ಅಸ್ನೋಟಿಕರ್ ಮತ್ತು ಅವರ ಕುಟುಂಬ ಸುಮಾರು 22 ವರ್ಷಗಳಿಂದ ಶಾಸಕರಾಗಿ ಹಾಗೂ ಮಂತ್ರಿಯಾಗಿ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಏನು ಮಾಡಿದ್ದೇನೆ ಎಂಬುವುದನ್ನು ಎಲ್ಲಿಯೂ ಹೇಳುತ್ತಿಲ್ಲ. ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದೇ ಈ ಜಿಲ್ಲೆಯ ಅಭಿವೃದ್ಧಿ ಎಂದು ತಿಳಿದಂತಿದೆ. ಇವರು ಈ ಹಿಂದೆ ಕಾಂಗ್ರೆಸ್, ಬಿಜೆಪಿ ಎಲ್ಲಾ ಪಕ್ಷದಲ್ಲಿದ್ದು, ಅಧಿಕಾರ ಅನುಭವಿಸಿ, ಆ ಪಕ್ಷದ ಎಲ್ಲಾ ಮುಖಂಡರಿಗೆ, ಕಾರ್ಯಕರ್ತರಿಗೆ ನೋವಾಗುವಂತೆ ನಡೆದುಕೊಂಡು ಈಗ ಜೆಡಿಎಸ್ ಪಕ್ಷಕ್ಕೆ ಬಂದಿದ್ದಾರೆ. ಮುಂದೋದು ದಿನ ಇವರು ಜೆಡಿಎಸ್‍ನಿಂದ ತನಗೆ ಅಧಿಕಾರ ಸಿಗಲಾರದೂ ಎಂದು ಗೊತ್ತಾದರೆ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಾರೆ. ಪ್ರತಿಯೊಂದು ಬಾರಿ ಪಕ್ಷ ಬದಲಿಸಿದಾಗಲೂ ಜನರಿಗೋಸ್ಕರ, ಅಭಿವೃದ್ಧಿಗೋಸ್ಕರ ಎನ್ನುವ ಇವರಿಂದ ಜಿಲ್ಲೆಯ ಅಭಿವೃದ್ಧಿ ಖಂಡಿತವಾಗಿಯೂ ಸಾಧ್ಯವಿಲ್ಲ. ಜಿಲ್ಲೆಯ ಜನತೆ ಹಿಂದುಳಿದವರಿಗೆ ಮಾರಕವಾಗಿರುವ ಆನಂದ ಅವರನ್ನು ತಿರಸ್ಕರಿಸಬೇಕು. ಅಲ್ಲದೇ ಏನು ಅಭಿವೃದ್ಧಿ ಕಾರ್ಯಮಾಡದ ಅನಂತಕುಮಾರ ಅವರನ್ನು ತಿರಸ್ಕರಿಸಿ ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಫರ್ಧಿಸಿರುವ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಅಂಕೋಲಾ ಪುರಸಭೆ ಸದಸ್ಯ ಶ್ರೀಧರ ನಾಯ್ಕ, ಪ್ರಮುಖರಾದ ವಿಘ್ನೇಶ್ವರ ನಾಯ್ಕ, ವಸಂತ ನಾಯ್ಕ ಭಟ್ಕಳ ಹಾಗೂ ಗಣೇಶ ನಾಯ್ಕ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.