ಯೌವನದಲ್ಲಿ ಯಾತ್ರೆ ಮಾಡಿದರೆ ಜೀವನದ ಬದಲಾವಣೆ ಅನುಸರಿಸಲು ಸಾಧ್ಯ; ಸ್ವರ್ಣವಲ್ಲಿ ಶ್ರೀ

ಶಿರಸಿ: ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಯೌವ್ವನದಲ್ಲಿಯೇ ಯಾತ್ರೆಗಳನ್ನು ಮಾಡಬೇಕು. ಆಗ ಜೀವನದಲ್ಲಾಗುವ ಬದಲಾವಣೆಯನ್ನು ಅನುಸರಿಸಲು ಸಾಧ್ಯವಾಗುತ್ತದೆ
ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸಲಹೆ ನೀಡಿದರು.

ಇಲ್ಲಿನ ನಯನ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಕೈಲಾಸ ಮಾನಸ ಯಾನ ‘ ಕೃತಿ ಬಿಡುಗಡೆ ಮಾತನಾಡಿದ ಅವರು, ತೀರ್ಥ ಯಾತ್ರೆಗಳನ್ನು ವಯಸ್ಸಾದ ಮೇಲೆ ‌ಮಾಡಬೇಕು ಎಂಬ ಭಾವನೆಯಿದೆ. ಆದರೆ ಅದನ್ನು ಬಿಟ್ಟು ಯೌವ್ವನದಲ್ಲಿಯೇ ಯಾತ್ರೆ ಮಾಡಬೇಕು. ಗಟ್ಟಿ ಶರೀರವೂ ಇರುತ್ತದೆ. ಕ್ಷೇತ್ರದ ವಿಧಿವಿಧಾನಗಳನ್ನು ಅನುಸರಿಸಲೂ ಸಾಧ್ಯವಾಗುತ್ತದೆ ಎಂದರು. ಕೈಲಾಸ ಮಾನಸ ಯಾನ ಕೃತಿ ಕನ್ನಡ ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆಯಾಗಿದೆ. ಈ ಕೃತಿ ಬೇರ ಬೇರೆ ಭಾಷೆಯಲ್ಲಿ ಪ್ರಕಟವಾಗುವ ಗುಣಮಟ್ಟ ಹೊಂದಿದೆ. ಉಳಿದ ಭಾಷೆಗಳಲ್ಲಿ ಪ್ರಕಟವಾದರೆ ಎಲ್ಲರಿಗೂ ಉಪಯೋಗವೂ ಆಗಲಿದೆ ಎಂದು ಹೇಳಿದರು.

ಮಾನಸ ಸರೋವರ ಮನಸ್ಸನ್ನು ಪರಿವರ್ತನೆ ಮಾಡುವ ಶಕ್ತಿಯನ್ನು ಹೊಂದಿದ ಕ್ಷೇತ್ರವಾಗಿದೆ. ಅಲ್ಲಿಗೆ ಹೋಗಿ ಬಂದ ಮೇಲೆ ಮನುಷ್ಯ ಬದಲಾಗುತ್ತಾನೆ. ಮನಸ್ಸು ಶುದ್ಧವಾಗುವುದೇ ಅದಕ್ಕೆ ಕಾರಣವಾಗಿದೆ. ಅದೊಂದು ಪವಿತ್ರವಾದ ಸ್ಥಳವಾಗಿದೆ. ಅಲ್ಲಿಗೆ ಹೋಗಿ ಬರುವುದು ದೊಡ್ಡ ಧನ್ಯತೆಯಾಗಿದ್ದು, ಹಲವಾರು ನದಿಗಳ ಉಗಮ ಸ್ಥಾನ ಮತ್ತು ಸಾಧು ಸಂತರು ತಪಸ್ಸನ್ನು ಮಾಡಿದ ಪುಣ್ಯ ಕ್ಷೇತ್ರ ವಾಗಿದೆ ಎಂದರು.

ಈ ವೇಳೆ ಪ್ರಮುಖರಾದ ಸುಬ್ರಹ್ಮಣ್ಯ, ಡಾ.ಕೆ.ವಿ.ಶಿವರಾಮ ಇದ್ದರು. ಅನಂತ ಪದ್ಮನಾಭ ಸ್ವಾಗತಿಸಿದರು. ಶ್ರೀಕಾಂತ ಹೆಗಡೆ ಹಾಗೂ ಕೃಷ್ಣಮೂರ್ತಿ ರಾಯ್ಸದ್ ನಿರೂಪಿಸಿದರು.

ಮಾನಸ ಸರೋವರ ಯಾತ್ರೆ ನಮ್ಮ ಜೀವನವನ್ನು ಬದಲಾಯಿಸುತ್ತದೆ. ಅಲ್ಲಿ ಹೋಗಿಬಂದ ಮೇಲೆ ನಾವು ಶಿವನಿಗೆ ದಾಸರಾಗುತ್ತೇವೆ. ದುಬೈ, ಹಾಂಕಾಂಗ್ ಹೋಗುವವರು ಯಾತ್ರೆಗೆ ತೆರಳಲಿ ಎನ್ನುವುದು ಪುಸ್ತಕದ ಒಂದು ಉದ್ದೇಶವಾಗಿದೆ. – ಅನಂತ ಪದ್ಮನಾಭ, ಕೃತಿಕಾರ

Categories: ಜಿಲ್ಲಾ ಸುದ್ದಿ

Leave A Reply

Your email address will not be published.