ಶಿವಸಾಕ್ಷಾತ್ಕಾರದಿಂದ ಸರ್ವರೂ ಮೃತ್ಯುಂಜಯರಾಗಬೇಕು; ವಿದ್ವಾನ್ ಉಮಾಕಾಂತ ಭಟ್

 

ಗೋಕರ್ಣ: ‘ಮರಣದ ಭಯದಿಂದಲೇ ಜೀವನ ಸಾಗುತ್ತಿರುತ್ತದೆ’ ನಿರ್ವಿಕಲ್ಪಕ ಸಮಾಧಿಯಲ್ಲಿ ಯೋಗಿಗಳಿಗೆ ಮೃತ್ಯುವಿನ ಅರಿವಾಗುತ್ತದೆ. ಮೃತ್ಯುವನ್ನು ಅರಿತರೆ ಮೃತ್ಯುಂಜಯರಾಗುತ್ತಾರೆ. ಶಿವಸಾನ್ನಿಧ್ಯವಿಲ್ಲದಿದ್ದರೆ ದೇಹ ಶವವಾಗುತ್ತದೆ. ಶಿವಸಾಕ್ಷಾತ್ಕಾರದಿಂದ ಸರ್ವರೂ ಮೃತ್ಯುಂಜಯರಾಗಬೇಕು ಎಂದು ಹಿರಿಯ ವಿದ್ವಾಂಸ ಉಮಾಕಾಂತ ಭಟ್ ಹೇಳಿದರು.

ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಸಂಶೋಧನ(ರಿ), ಶಿರಸಿ ಇದರ ಸಹಯೋಗದಲ್ಲಿ ಇಲ್ಲಿನ ಶ್ರೀ ಮೇಧಾ ದಕ್ಷಿಣಾಮೂರ್ತಿ ವೇದ ಭವನ ಸಂಸ್ಕೃತ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ “ಜೀವನಂ, ಮರಣೋತ್ತರಜೀವನಂ, ಆತ್ಮಸಾಕ್ಷಾತ್ಕಾರಶ್ಚ” ಎಂಬ ವಿಷಯದ ಬಗ್ಗೆ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರಸಂಕಿರಣದ ಸಮಾರೋಪಸಮಾರಂಭದಲ್ಲಿ ಮಾತನಾಡಿದರು.

ಸಂಶೋಧನ ಸಂಸ್ಥೆಯ ಅಧ್ಯಕ್ಷ ಡಾ. ಜಿ.ಎನ್.ಭಟ್ ಅವರು ‘ಹಿರಿಯ ವಿದ್ವಾಂಸರ ಜೊತೆ ಯುವ ವಿದ್ವಾಂಸರು ಬೆರೆತು ಉತ್ತಮ ಗುಣಮಟ್ಟದ ಸಂಶೋಧನ ಕಾರ್ಯ ಮಾಡಬೇಕು ಎನ್ನುವುದು ಸಂಸ್ಥೆಯ ಆಶಯ. ಆದ್ದರಿಂದ ಇಂತಹ ಸಮ್ಮೇಳನವನ್ನು ಪ್ರತಿವರ್ಷ ಆಯೋಜಿಸಲಾಗಿತ್ತಿದೆ’ ಎಂದು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಅತಿಥಿಗಳಾದ ಬೇಲೂರು ರಾಮಕೃಷ್ಣ ಮಠದ ಸ್ವಾಮಿ ಪರರೂಪಾನಂದ ಮಹಾರಾಜ ಅವರು ‘ಭಗವಂತನು ಭಕ್ತವತ್ಸಲ. ಅಲ್ಪ ಸೇವೆಗೆ ಅಪಾರ ಕರುಣೆಯನ್ನು ತೋರಿಸುತ್ತಾನೆ. ದೇವಭಾಷೆಯ ಸೇವೆ ಮಾಡುವ ವಿದ್ವಾಂಸರಿಗೆ ಖಂಡಿತವಾಗಿಯೂ ದೈವಾನುಗ್ರಹ ಲಭಿಸುತ್ತದೆ. ಅದರಿಂದ ಸಂಸ್ಕೃತ ಭಾಷೆ ಇನ್ನೂ ಸಮೃದ್ಧವಾಗಲಿ’ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ಪ್ರಬಂಧಗಳಿಗೆ ದತ್ತಿ ಪುರಸ್ಕಾರವನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ. ಕೆ.ವಿ.ಜೋಶಿ ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಎಲ್. ರಾಘವ ವಂದಿಸಿದರು. ಡಾ. ವಿ.ಕೆ.ಹಂಪಿಹೊಳಿ ನಿರೂಪಿಸಿದರು. ವಿವಿಧ ಸತ್ರಗಳಲ್ಲಿ 25 ಕ್ಕೂ ಹೆಚ್ಚು ವಿದ್ವಾಂಸರು ಪ್ರಬಂಧ ಮಂಡಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.