ಶಿರಸಿಯಲ್ಲಿ ಇಂದಿನಿಂದ ಬೇಡರ ವೇಷ ಪ್ರಾರಂಭ: ಒಟ್ಟೂ 40 ತಂಡ ಭಾಗಿ

ಶಿರಸಿ: ರಾಜ್ಯ ಪ್ರಸಿದ್ಧ, ಎರಡು ವರ್ಷಕ್ಕೊಮ್ಮೆ ಹೊಳಿಯ ಸಂದರ್ಭದಲ್ಲಿ ಶಿರಸಿಯಲ್ಲಿ ಕಾಣಸಿಗುವ ಬೇಡರ ವೇಷ ಭಾನುವಾರದಿಂದ ಪ್ರಾರಂಭವಾಗಿದ್ದು, ಕಳೆದೊಂದು ತಿಂಗಳಿನಿಂದ ಗಲ್ಲಿ ಗಲ್ಲಿ ಯಲ್ಲಿ ತಾಲೀಮು ನಡೆಸಿದ್ದ ತಂಡಗಳು ಇದೀಗ ತಮ್ಮ ಪ್ರದರ್ಶನ ನೀಡಲು ಸಜ್ಜಾಗಿವೆ.

ಬೇಡರ ವೇಷದಲ್ಲಿ ಈ ಬಾರಿ ಒಟ್ಟೂ 40 ತಂಡಗಳು ಭಾಗವಹಿಸಲಿದೆ. ಶಿರಸಿ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ 16, ನಗರ ಠಾಣೆ ವ್ಯಾಪ್ತಿಯಲ್ಲಿ 21 ಹಾಗೂ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 3 ತಂಡಗಳು ಕುಣಿಯಲಿದ್ದಾರೆ.

ಬೇಡರ ವೇಷದ ಹಿನ್ನಲೆಯಲ್ಲಿ ನಗರದ ವಿವಿಧ ಕಡೆಗಳಲ್ಲಿ ರತಿ ಕಾಮಣ್ಣರ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ನಿಲೇಕಣಿ, ದೇವಿಕೆರೆ, ಟಿ.ವಿ.ಸ್ಟೇಷನ್ ರಸ್ತೆ, ವೀರಭದ್ರ ಗಲ್ಲಿ, ಮಾರಿಗುಡಿ, ಮರಾಠಿಕೊಪ್ಪ ಸೇರಿದಂತೆ 10 ಕ್ಕೂ ಹೆಚ್ಚಿನ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮಾ.21 ರಂದು ಅಂತಿಮ ದಿನ ಬಣ್ಣ ಎರಚಿ ಸಂಭ್ರಮಿಸಿ ಮೂರ್ತಿಯನ್ನು ಪದ್ಧತಿ ಪ್ರಕಾರ ಸುಡಲಾಗುತ್ತದೆ. ಅಲ್ಲದೇ ಈಗಾಗಲೇ ಹುಲಿ ವೇಷಧಾರಿಗಳು ನಗರದಾದ್ಯಂತ ಸಂಚರಿಸುತ್ತಿದ್ದು, ಹೋಳಿ ದಿನದ ವರೆಗೆ ಇದು ನಡೆಯಲಿದೆ.

ಪ್ರತಿ ಬಾರಿಯು ಬೇಡರವೇಷದಲ್ಲಿ ಡಿಜೆ ಬಳಕೆಯನ್ನು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಡಿಜೆ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧ ಮಾಡಲಾಗಿದೆ. ಪಿಯುಸಿ, ಎಸ್.ಎಸ್.ಎಲ್.ಸಿ. ಪರೀಕ್ಷೆ , ಚುನಾವಣಾ ನೀತಿ ಸಂಹಿತೆಯ ಕಾರಣದಿಂದ ಡಿಜೆಯನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಡಿಜೆ ಬಳಸಿದಲ್ಲಿ ಅದನ್ನು ಸೀಸ್ ಮಾಡುವುದಾಗಿಯೂ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ ಈ ಬಾರಿ ಡಿಜೆಯ ಹೊರತಾದ ಶುದ್ಧ ಜಾನಪದ ಬೇಡರ ವೇಷ ನೋಡಲು ಸಿಗಲಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.