ಜಿಲ್ಲೆಯ ಅಭಿವೃದ್ಧಿ, ಯುವ ಸಮುದಾಯಕ್ಕೆ ಅನಂತಕುಮಾರ ಹೆಗಡೆ ದೊಡ್ಡ ಕ್ಯಾನ್ಸರ್: ಮಾಜಿ ಸಚಿವ ಆನಂದ ಅಸ್ನೋಟಿಕರ್

ಕುಮಟಾ: ಅನಂತಕುಮಾರ ಹೆಗಡೆ ಎಂಬುದು ಉತ್ತರಕನ್ನಡ ಜಿಲ್ಲೆಯ ಅಭಿವೃದ್ದಿ ಹಾಗೂ ಯುವ ಸಮುದಾಯಕ್ಕೆ ದೊಡ್ಡ ಕ್ಯಾನ್ಸರ್. ಚುನಾವಣೆ ಸಂದರ್ಭಗಳಲ್ಲಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕ ಜಿಲ್ಲೆಯಲ್ಲಿ ಕೊಮುಗಲಭೆ ಸೃಷ್ಟಿಸಿ, ರಾಜ್ಯದಲ್ಲಿಯೇ ನಮ್ಮ ಜಿಲ್ಲೆಯನ್ನು ಕೋಮುಗಲಭಾ ಜಿಲ್ಲೆಯನ್ನಾಗಿ ಮಾಡುತ್ತಿದ್ದಾರೆ ಎಂದು ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಮಾಜಿ ಸಚಿವ ಆನಂದ ಅಸ್ನೋಟಿಕರ್ ಹರಿಹಾಯ್ದಿದ್ದಾರೆ.

ಭಾನುವಾರ ಪಟ್ಟಣದ ವೈಭವದಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ ಪತ್ರಿಕಾಗೋಷ್ಠಿ ಹಾಗೂ ಚುನಾವಣಾ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಜಾತಿ, ಧರ್ಮದ ರಾಜಕಾರಣ ಮಾಡುವ ಬದಲು ನಿಮ್ಮಲ್ಲಿ ಗಂಡಸ್ತನವಿದ್ದರೆ ಒಂದು ವರ್ಷಗಳ ಹಿಂದೆ ನಡೆದಿರುವ ಪರೇಶ ಮೇಸ್ತಾ ಪ್ರಕರಣದ ಸಿಬಿಐ ತನಿಖೆಯ ಮಾಹಿತಿಯನ್ನು ಜಿಲ್ಲೆಯ ಜನತೆಗೆ ಬಹಿರಂಗಪಡಿಸಿ. ಮುಂದಿನ ಲೋಕಸಭಾ ಚುನಾವಣೆಯವರೆಗೆ ಈ ಪ್ರಕರಣವನ್ನು ಜೀವಿತವಾಗಿ ಇಡುತ್ತಾರೆಂದು ಪರೇಶ ಮೇಸ್ತಾನ ದೇಹದ ಮೇಲೆ ರಾಜಕೀಯ ಮಾಡಿದ ವೇಳೆಯೇ ನಾನು ಬಹಿರಂಗವಾಗಿ ತಿಳಿಸಿದ್ದೆನು. ಅದು ಸುಳ್ಳಾಗಲಿಲ್ಲ. ನಮ್ಮ ಜಿಲ್ಲೆ ಅತ್ಯಂತ ಕೆಳಮಟ್ಟದ ರಾಜಕಾರಣದಿಂದ ಬಳಲಲು ಅನಂತಕುಮಾರ ಹೆಗಡೆಯೇ ಕಾರಣ ಎಂದು ಕಿಡಿಕಾರಿದರು.

25 ವರ್ಷಗಳಿಂದ ನಮ್ಮ ಜಿಲ್ಲೆಯ ಎಮ್‍ಪಿಯಾಗಿ ಜಿಲ್ಲೆಯ ಜನತೆಗೆ ಯಾಮಾರಿಸುವ, ಮಳ್ಳು ಮಾಡುವ, ಕೋಮುಗಲಬೆ ಸೃಷ್ಟಿಸುವ ಕಾರ್ಯಗಳನ್ನು ಹೊರತುಪಡಿಸಿ, ಜನರಿಗೆ ಕಾಣುವಂತಹ ಒಂದಾದರೂ ಜನುಪಯೋಗಿ ಕಾರ್ಯಗಳನ್ನು ತೋರಿಸಲಿ. ಚುನಾವಣೆಯ ಸಂದರ್ಭದಲ್ಲಿ ಧರ್ಮದ ಆಧಾರದ ಮೇಲೆ ಯುವಕರನ್ನು ಬಳಸಿಕೊಳ್ಳುವ ಬದಲಿಗೆ ಅವರ ಭವಿಷ್ಯದ ಬಗ್ಗೆ ಚಿಂತಿಸಲಿ. ಮೋದಿಯವರ ಹೆಸರನ್ನು ಬಳಸಿಕೊಂಡು ಮತಯಾಚಿಸುವ ಇವರು, ಮೊದಲು ಇವರ ತಂದೆಯ ಮತವನ್ನು ಪಡೆಯಲಿ ಎಂದು ಅನಂತಕುಮಾರ ಹೆಗಡೆ ವಿರುದ್ಧ ವ್ಯಂಗ್ಯವಾಡಿದರು.

ಅನಂತಕುಮಾರ ಹೆಗಡೆಗಿರುವ ಅಹಂಕಾರ ಹಾಗೂ ವ್ಯಕ್ತಿತ್ವದಿಂದ ಅವರು ಜನರಸೇವೆ ಮಾಡಲು ಸಾಧ್ಯವೇ ಇಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆಯೇ ಸೌಮ್ಯತೆಯಿಂದ ಮಾತನಾಡುವುದನ್ನು ಗೊತ್ತಿಲ್ಲದ ಇವರಿಗೆ, ಭಾರತೀಯ ಜನತಾ ಪಕ್ಷದಲ್ಲೇ ಹಲವು ವಿರೋಧಿಗಳಿದ್ದಾರೆ. ತಾನೇ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆಯಿಂದ ಸ್ವತಃ ಯಡಿಯೂರಪ್ಪನವರ ತಲೆಯನ್ನೇ ಹಿಡಿದು, ಒಂದೇ ವೇದಿಕೆಯಲ್ಲಿ ಇಬ್ಬರೂ ಕುಳಿತುಕೊಳ್ಳುವ ಯೋಗ್ಯತೆಯನ್ನು ಕಳೆದುಕೊಂಡಿದ್ದಾನೆ ಎಂದು ಏಕವಚನದಲ್ಲಿ ನುಡಿದರು.

ಈ ಜಿಲ್ಲೆಯಲ್ಲಿದ್ದಂತಹ ಪರಿಸರ ಅಕ್ಕಪಕ್ಕದ ಜಿಲ್ಲೆಯಲ್ಲೂ ಇದೆ. ಆದರೆ ಅಲ್ಲಿ ರೇಲ್ವೇ ಸೇರಿದಂತೆ ಅನೇಕ ಅಭಿವೃದ್ದಿ ಕೆಲಸಗಳು ಪರಿಸರದ ಹೆಸರಿನಲ್ಲಿ ನಿಂತಿಲ್ಲ. ಆದರೆ ನಮ್ಮ ಜಿಲ್ಲೆಯಲ್ಲಿರುವ ಪರಿಸರವಾದಿಗಳು ಅನಂತಕುಮಾರ ಹೆಗಡೆ ಅವರ ಸಂಬಂಧಿಗಳಾಗಿದ್ದರಿಂದ ಇಲ್ಲಿ ಪರಸರದ ಹೆಸರಿನಲ್ಲಿ ಎಲ್ಲಾ ಕೆಲಸಕ್ಕೂ ತಡೆ ಬೀಳುತ್ತಿದೆ ಎಂದು ದೂರಿದರಲ್ಲದೆ, ಕದಂಬ ಸಂಸ್ಥೆ ಮೂಲಕ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಡಾಂಬರ್ ವ್ಯವಹಾರ ನಡೆಸಿದ್ದಾರೆ. ಈ ಡಾಂಬರನ್ನು ಮುಸ್ಲಿಂ ರಾಷ್ಟ್ರದಿಂದ ಆಮದುಮಾಡಿಕೊಂಡು ಬಂದಂತಹ ವ್ಯವಹಾರದÀ ದುಡ್ಡಿನಲ್ಲಿ ಬೆಂಗಳೂರು ಹಾಗೂ ಶಿರಸಿಯಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ಮನೆಕಟ್ಟಿಸಿದ್ದಾರೆ. ಮುಸ್ಲಿಂ ರಾಷ್ಟ್ರದ ದುಡ್ಡು ಹೆಗಡೆಗೆ ಬೇಕು. ಆದರೆ ಚುನಾವಣೆಯಲ್ಲಿ ಮಾತ್ರ ಮುಸ್ಲಿಂ ಮತ ಬೇಡಾ ಎನ್ನುತ್ತಾರೆ ಎಂದು ವ್ಯಂಗವಾಡಿದರು.

ಉಡುಪಿ, ಮಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳನ್ನು ಗಮನಿಸಿದರೆ ನಮ್ಮ ಜಿಲ್ಲೆ ಸಾಕಷ್ಟು ಹಿಂದುಳಿದಿದೆ. ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ ಹೀಗೆ ಹತ್ತಾರು ಸಮಸ್ಯೆಗಳು ಎಮ್‍ಪಿಯವರ ಕಣ್ಣಿಗೆ ಕಾಣುವುದಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಕೊಳವೆ ಮೀನುಗಾರಿಕಾ ಬಂದರು ಮಂಜೂರಾಗಿತ್ತು. ಆದರೆ ತಾನೇ ಮಂಜೂರಿ ಮಾಡಿದ್ದು ಎಂದು ಅನಂತಕುಮಾರ ಹೆಗಡೆ ತಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ನಯಾಪೈಸೆ ನಾಲೇಜ್ ಇಲ್ಲದ ಇವನು ಹಿರಿಯರನ್ನು ಗೌರವಿಸದಿರುವುದಕ್ಕೆ ನಾನು ನಾಲಾಯಕ್, ಲೋಫರ್ ಎಂದಿದ್ದೇನೆ. ಇದನ್ನು ರಾಜ್ಯ, ರಾಷ್ಟ್ರ ಬಿಜೆಪಿ ಒಪ್ಪಿದೆ. ಆದ್ದರಿಂದಲೇ ಏನೂ ಹೇಳಿಲ್ಲ ಅಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಪ್ರದೀಪ ನಾಯಕ ದೇವರಬಾವಿ, ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ಗಣಪಯ್ಯ ಗೌಡ, ರಾಜ್ಯ ಕಾರ್ಯದರ್ಶಿ ಗಜಾನನ ನಾಯ್ಕ, ತಾಲೂಕಾಧ್ಯಕ್ಷ ಮಂಜು ಪಟಗಾರ, ಕ.ರಾ.ವೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.

ನಾನು ಹಿಂದುಳಿದ ವರ್ಗಗಳ ಜನತೆಯ ಹೋರಾಟಕ್ಕಾಗಿ ಕಣಕ್ಕಿಳಿದಿದ್ದೇನೆ. ಎಮ್‍ಪಿಯಾಗಬೇಕೆಂಬ ಆಸೆ ನನಗಿಲ್ಲ. ದೇಶಪಾಂಡೆಯವರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ. ಒಂದೇ ಮನೆಯಲ್ಲಿರುವ ಮಿತ್ರಪಕ್ಷದಲ್ಲಿ ಸ್ವಲ್ಪ ಗೊಂದಲವಿರಬಹುದು. ಆದರೆ ನಾವೆಲ್ಲರೂ ಒಂದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಯಾವುದೇ ಬೇದಭಾವವಿಲ್ಲ. ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ದುಡಿಯುತ್ತೇವೆ. – ಆನಂದ ಅಸ್ನೋಟಿಕರ

Categories: ಜಿಲ್ಲಾ ಸುದ್ದಿ

Leave A Reply

Your email address will not be published.