ವಿದ್ಯಾರ್ಥಿಗಳು ತಮ್ಮಅಜ್ಞಾನ ಹೋಗಲಾಡಿಸಿದ ಗುರುಗಳಿಗೆ ವಿಧೇಯರಾಗಿರಬೇಕು; ವಿದ್ಯಾರ್ಥಿ ಪ್ರಣೀತ


ಕುಮಟಾ: ನಮ್ಮಲ್ಲಿನ ಅಜ್ಞಾನವನ್ನು ಹೋಗಲಾಡಿಸಿ, ಪ್ರತಿಭೆಯನ್ನು ಹೊರಗೆ ಪ್ರಕಾಶಿಸುವಂತೆ ಮಾಡಲು ಮುಕ್ತ ಅವಕಾಶ ನೀಡಿದ ಮೆಚ್ಚಿನ ಗುರುಗಳಿಗೆ ಜೀವನ ಪರ್ಯಂತ ನಾವೆಲ್ಲರೂ ಸದಾ ಋಣಿಯಾಗಿರಬೇಕು ಎಂದು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಣೀತ ರವಿರಾಜ ಕಡ್ಲೆ ಅಭಿಪ್ರಾಯಪಟ್ಟರು.

ಅವರು ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ದೀಪದಾನ ಸಮಾರಂಭದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಶಾಲೆಯ ಸುಂದರ ಕಲಿಕಾ ಪರಿಸರ, ಶಿಕ್ಷಕವೃಂದದವರ ಸೂಕ್ತ ಮಾರ್ಗದರ್ಶನ ನಮ್ಮ ಮುಂದಿನ ಜೀವನಕ್ಕೆ ಆಧಾರವಾಗಲಿದೆ ಎಂದರು. ಸರ್ವಾಂಗೀಣ ಪ್ರಗತಿಗೆ ಸಾಧ್ಯವಾದ ತಮ್ಮ ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್ ಅಲ್ಲ ಅದಕ್ಕಿಂತ ಮಿಗಿಲಾದ ಪ್ಲಾಟಿನಮ್ ಲೈಫ್ ಆಗಿತ್ತೆಂಬುದನ್ನು ವಿಶ್ವಾಶ ವೆಂಕಟೇಶ ಪೈ ಹೇಳಿದರು.

ಮೌಲ್ಯಯುತ ಶಿಕ್ಷಣನೀಡಿ ನಮ್ಮನ್ನು ತಿದ್ದಲು ದಾರಿ ದೀಪದಂತಿರುವ ಶಿಕ್ಷಕರನ್ನು ಸದಾ ಗೌರವಿಸಬೇಕು. ಶಾಲೆಯ ಬಗ್ಗೆ ಅಭಿಮಾನ ಪ್ರೀತಿ ಹೊಂದಿರಬೇಕು. ಎಂದಿಗೂ ಕಲಿತ ಶಾಲೆ, ಕಲಿಸಿದ ಶಿಕ್ಷಕರನ್ನು ಮರೆಯಬಾರದೆಂದು ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಮೋಹನ ಶಾನಭಾಗ ತಿಳಿಸಿದರು. ಮೊಬೈಲ್, ಟಿವಿ, ಇಂಟರ್‍ನೆಟ್‍ಗಳಿಂದ ದೂರ ಇದ್ದಷ್ಟೂ ಅಭ್ಯಾಸಕ್ಕೆ ಅನುಕೂಲವಾಗುತ್ತದೆ. ಹೆಚ್ಚು ಅಂಕಗಳಿಸುವ ದೃಢ ಸಂಕಲ್ಪ ಮಾಡಿ ಎಂದು ಕೆನರಾ ಎಜ್ಯುಕೇಶನ್ ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ ಕರೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಅನವಶ್ಯಕ ಭಯಪಡದೇ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಆತ್ಮವಿಶ್ವಾಸವೊಂದಿದ್ದರೆ ಸಾಕು ಪರೀಕ್ಷೆ ಗೆಲ್ಲಬಹುದು. ಗೆದ್ದು ಉನ್ನತಿಗೇರುವ ನಲಿವು ನಿಮ್ಮನ್ನು ಆವರಿಸಲಿ. ಭವಿಷ್ಯದ ಬಾಳು ಬಂಗಾರವಾಗಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ನಿವೃತ್ತಿಯಂಚಿನಲ್ಲಿರುವ ಹಿರಿಯ ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗ ಅವರನ್ನು ವಿದ್ಯಾರ್ಥಿವೃಂದದ ಪರವಾಗಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ರಕ್ಷಿತಾ ಪಟಗಾರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಿಗಸ್ ಸ್ವಾಗತಿಸಿ, ಪೂರ್ವ ತಯಾರಿ ಪರೀಕ್ಷೆಯ ಫಲಿತಾಂಶ ವಿಶ್ಲೇಷಿಸಿದರು. ಮೊದಲ ಹತ್ತು ಶ್ರೇಯಾಂಕಿತರಿಗೆ ಬಹುಮಾನಿಸಲಾಯಿತು. ಶಿಕ್ಷಕ ಸುರೇಶ ಪೈ ನಿರೂಪಿಸಿದರೆ, ಶಿಕ್ಷಕ ಕಿರಣ ಪ್ರಭು ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ತನುಜಾ ಗೌಡ ಮತ್ತು ಕುಮಾರ ಪ್ರಣೀತ ಕಡ್ಲೆ ಗುರುವಂದನೆ ಸಲ್ಲಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.