ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ: ಮೂಲಭೂತ ಸೌಕರ್ಯಗಳ ಕೊರತೆ


ಕುಮಟಾ: ಪುರಾಣ ಪ್ರಸಿದ್ಧ ಹಾಗೂ ನೈಸರ್ಗಿಕವಾಗಿ ರಾಜ್ಯದಲ್ಲಿ ಗುರುತಿಸುಕೊಳ್ಳುವಂತಹ ತಾಲೂಕಿನ ಅನೇಕ ಪ್ರದೇಶಗಳು ಹಾಗೂ ಪುರಾಣ ಪ್ರಸಿದ್ಧ ತಾಣಗಳು ಪ್ರವಾಸೋಧ್ಯಮ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಎಲೆಯಮರೆಯ ಕಾಯಾಗಿ, ಸಮರ್ಪಕವಾದ ಮೂಲಭೂತ ಸೌಲಭ್ಯಗಳಿಲ್ಲದೇ ಬಡವಾಗುತ್ತಿದೆ.

ಅಘನಾಶನಿ, ಬಡಗಣಿ, ಚಂಡಿಕಾಹೊಳೆ, ವಾಟೆ ಹೊಳೆ, ಅರಬ್ಬಿ ಸಮುದ್ರ ತೀರ, ಪ್ರಸಿದ್ಧ ದೇವಾಲಯಗಳು, ಜಲಪಾತ, ಕೋಟೆಯಿಂದ ಒಳಗೊಂಡಿದೆ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಸರಿಯಾದ ಅಭಿವೃದ್ಧಿ ಕಾಣುತ್ತಿಲ್ಲ. ತಾಲೂಕಿನಲ್ಲಿ 30ಕ್ಕೂ ಹೆಚ್ಚು ಪ್ರವಾಸೋದ್ಯಮದ ಕೇಂದ್ರವಿದೆ. ಆದರೆ ಕುಡಿಯುವ ನೀರು, ವಸತಿ ವ್ಯವಸ್ಥೆ ಇಲ್ಲ. ಕುಮಟಾದ ಪ್ರವಾಸೋದ್ಯಮ ಕೇಂದ್ರದ ಮಾಹಿತಿ, ದಾರಿಯಾಗಲಿ ಪ್ರವಾಸೋದ್ಯಮ ಇಲಾಖಾ ಕಡತದಲ್ಲಿಯೇ ಕಾಣುತ್ತಿಲ್ಲ. ಅಧಿಕಾರಿಗಳು ಪ್ರತಿವರ್ಷ ತಾಲೂಕಿಗೆ ಪಿಕ್‍ನಿಕ್ ಲೆಕ್ಕದಂತೆ ಬಂದು ಸರಾಕಾರಿ ಹಣವನ್ನು ಹಾಳು ಮಾಡುವುದನ್ನು ಬಿಟ್ಟರೆ ಮತ್ತೇನು ಅಭಿವೃದ್ಧಿಯಾಗುತ್ತಿಲ್ಲ.

ಲಕ್ಷಾಂತರ ವರ್ಷದ ಇತಿಹಾಸವಿರುವ ಗೋಕರ್ಣ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿಯಾಗಿದೆ. ಇಲ್ಲಿನ ಶ್ರೀಮಹಾಗಣಪತಿ, ಶ್ರೀಮಹಾಬಲೇಶ್ವರ ದೇವಾಲಯಗಳು, ಸರ್ವಪಾಪ ನಿವಾರಕವಾದ ಕೋಟಿತೀರ್ಥವಿದೆ. 9ನೇ ಶತಮಾನದ ಧಾರೇಶ್ವರದ ಧಾರಾನಾಥ, ಲಕ್ಷಾಂತರ ಜನರು ಸಂದರ್ಶಿಸುವ ಹಾಗೂ ಎತ್ತರದ ಗುಡ್ಡದಮೇಲೆ ಸುತ್ತಲೂ ಸೃಷ್ಠಿ ಸೌಂದರ್ಯದಿಂದ ಕಂಗೊಳಿಸುತ್ತಿರುವ ಬಾಡದ ಕಾಂಚಿಕಾ ಪರಮೇಶ್ವರಿ ದೇವಾಲಯ, ಲುಕ್ಕೇರಿಯ ಗುಡ್ಡದ ಮೇಲಿರುವ ನೈಸರ್ಗಿಕವಾಗಿಯೇ ಆಕರ್ಷಣೀಯವಾಗಿರುವ ಶ್ರೀ ಬೋಳೆ ಶಂಭು ಲಿಂಗೇಶ್ವರ, ನಗರದ ಶಾಂತೇರಿ ಕಾಮಾಕ್ಷಿ, ಕಾವೂರೂ ಕಾಮಾಕ್ಷಿ, ರಾಮಾಯಣದ 4 ನೇ ಅಧ್ಯಾಯದಲ್ಲಿಯೇ ವರ್ಣಿಸಲ್ಪಟ್ಟ ಭೈರವೇಶ್ವರ ಸನ್ನಿಧಿಯ ಯಾಣವಿದೆ. ಕುಂಭೇಶ್ವದಂತ ನೂರಕ್ಕೂ ಹೆಚ್ಚು ದೇವಾಲಯಗಳಿವೆ. ಪ್ರಸಿದ್ದ ಗೋರೆ ಮತ್ತು ದಿವಗಿ ಮಠಗಳು, ನಿಸರ್ಗ ರಮಣೀಯ ರಾಮಚಂದ್ರಾಪುರ ಮಠದ ಹೋಸಾಡದ ಗೋಶಾಲೆಯಂತ ಪ್ರಖ್ಯಾತ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವಿದೆ.

ರಾಮನಗಿಂಡಿ ಬೀಚ್, ಹೆಡ್ ಬಂದರ್ ಬೀಚ್, ಮುಂಗೋಡ್ಲದ ಅರ್ದಚಂದ್ರಾಕೃತಿ ಬೀಚ್, ಕಾಗಾಲದ ಬೀಚ್, ಗೋಕರ್ಣದ ಕುಡ್ಲೆ ಬೀಚ್, ಓಂ ಬೀಚ್ ಇತ್ಯಾದಿ ಜಗತ್ತಿನ ಗಮನ ಸೇಳೆದಿರುವ ಹಲವು ಬೀಚ್‍ಗಳಿವೆ. ದೇವಿಮನೆಯ ಫಾಲ್ಸ್, ಸಮೀಪದಲ್ಲಿಯ ಬೆಣ್ಣೆ ಫಾಲ್ಸ್, ಹಾಗೂ ಬಡಾಳದ ವಾಟೆ ನದಿಯ ಫಾಲ್ಸ್ ಸೇರಿದಂತೆ ಹಲವು ಜಲಧಾರೆಗಳಿವೆ.

15 ನೇ ಶತಮಾನದ ಸರ್ಪಮಲ್ಲಿಕನ ಐತಿಹಾಸಿಕ ಮಿರ್ಜಾನ ಕೋಟೆ, 10 ನೇ ಶತಮಾನದ ಕದಂಬ ವಂಶದ ಚಂದಾವರ ಕೋಟೆ ಪ್ರದೇಶ, 8 ನೇ ಶತಮಾನದ ಮೇದನಿ ಕೋಟೆ, 9 ನೇ ಶತಮಾನದ ಅಘನಾಶನಿ ಕೋಟೆಗಳಿವೆ, ತದಡಿ, ವನ್ನಳ್ಳಿ, ಹೆಡ್‍ಬಂದರ್‍ನಲ್ಲಿ ಮೀನುಗಾರಿಕಾ ಬಂದರುಗಳಿವೆ. ಐಗಳ ಕುರ್ವೇಯಂತಹ ಜನವಸತಿ ಇರುವ ರಮಣೀಯ ದ್ವೀಪಪ್ರದೇಶವಿದೆ. ಸಂಪೂರ್ಣ ದಟ್ಟವಾದ ಅರಣ್ಯ ಪ್ರದೇಶದಿಂದಲೇ ಆವೃತ್ತವಾಗಿರುವ ಬ್ರಹ್ಮೂರು, ನಾಗೂರು, ಸಂಡಳ್ಳಿ, ಬಡಾಳ, ಸಂತೆಗುಳಿಯಂತ ಮುಂಜಾನೆ ಅವಧಿಯಲ್ಲಿ ಸದಾ ಮಂಜಿನಿಂದ ಆವೃತ್ತವಾಗಿರುವಂvಹÀ ಸ್ಥಳವಿದೆ. ತಾರಿದೋಣಿಯನ್ನೇ ಅವಲಂಭಿಸಿರುವ ಮೋರ್ಸೆ, ಹೆಗಡೆ-ಮಿರ್ಜಾನ ತಾರಿಬಾಗಿಲು, ಅಘನಾಶಿನಿ-ತದಡಿ ಸಂಪರ್ಕದ ತಾರಿದೋಣಿ ವ್ಯವಸ್ಥೆ ಇರುವ ಪ್ರದೇಶಗಳಿವೆ. ಅಘನಾಶನಿಯ ಕಿರಬೇಲೆಯಲ್ಲಿಯ ಆಶ್ಚರ್ಯ ಹುಟ್ಟಿಸುವ ಗುಹೆ, ಯಾಣದ ಗುಹೆಗಳು, ಕಪ್ಪು ಶಿಲಾವೃತ ಬಂಡೆಗಳು, ಜೀವವೈವಿದ್ಯ, ಔಷಧ ಸಸ್ಯಗಳ ಕುರಿತು ಸಂಶೋಧನೆ, ಅದ್ಯನ ಮಾಡುವಂತಹ ವಿದೇಶದವರನ್ನು ಆಕರ್ಶಿಸುವ ದೇವಿಮನೆಯಲ್ಲಿ ಕತ್ತಲೆ ಕಾಡಿನ ಪ್ರದೇಶವಿದೆ.

ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಅನೇಕ ಕಪ್ಪೆಯ ಪ್ರಭೆದ, ಜೀವ-ಜಂತುಗಳು ತಾಲೂಕಿನ ದೇವಿಮನೆ ಹಾಗೂ ಬಡಾಳದ ಕಾನಿನಲ್ಲಿ ನೋಡಲು ಸಾಧ್ಯ ಎಂಬುದು ಹಲವರ ಅಭಿಪ್ರಾಯ. ಬೇಳಚು, ಅಡ್ಡ ಬೆಳಚು, ಕಲ್ಗ್, ಕೆಂಪುಕಲ್ಗ, ಸಣ್ಣ ಬೇಳಚು ಇತ್ಯಾದಿ ದೇಹಕ್ಕೆ ಕ್ಯಾಲ್ಸಿಯಂ ಒದಗಿಸುವ 49 ಜಾತಿಯ ಬೆಳಚುಗಳು ತದಡಿ ಪ್ರದೇಶದಲ್ಲಿದೆ.

ಮೂರೂರು, ಕಲ್ಲಬ್ಬೆ, ಬೊಗರಿ ಬೈಲ್, ತದಡಿ ಹಿನ್ನಿರಿನ ಪ್ರದೇಶ, ಮಾಸೂರು, ಲುಕ್ಕೇರಿಯಲ್ಲಿ ನೂರಾರು ಜಾತಿಯ ಪಕ್ಷಿ ನೋಡಲು ಸಾದ್ಯ. ಅಕ್ಟೋಬರ್‍ದಿಂದ ಎಪ್ರಿಲ್ ತನಕ ವಲಸೆ ಬರುವ ವಿದೇಶಿ ಪಕ್ಷಿಗಳಿಂದ ಇಲ್ಲಿನ ಪ್ರದೇಶಗಳು ಪಕ್ಷಿಧಾಮದಂತೆ ಗೋಚರಿಸುತ್ತದೆ. ವಿದೇಶದವರ ಬಾಯನ್ನು ಚಪ್ಪರಿಸುವಂತೆ ಮಾಡುವ ನಿರ್ಯಾತವಾಗುತ್ತಿರುವ ಮೀನುಗುವ ಜಾಲಿ ಏಡಿ, ಕೊಂಡ್ಗ, ಕಲ್ಲೆಡಿಯಂತವು ಹೇರಳವಾಗಿದೆ. ಯಸವಣ, ಪಾಪ್ಲೇಟ್, ರಾಣಿಮೀನು, ಸಮದಳ, ಕೊಕ್ಕರೆಯಂತಹ ರುಚಿಕಟ್ಟಾದ ಮೀನುಗಳು, ಹೆಚ್ಚು ನಿರ್ಯಾತವಾಗುತ್ತ್ತಿರುವ ಸೀಗಡಿ ಮೀನುಗಳು ಹೇರಳವಾಗಿದೆ. ಈ ರೀತಿ ಕುಮಟಾ ತಾಲೂಕು ಪ್ರವಾಸೋದ್ಯಮದ ದೃಷ್ಟಿಯಿಂದ ಒಂದು ಉಪಖಂಡ ಎನಿಸಿಕೊಂಡಿದೆ.

ಪ್ರವಾಸೋದ್ಯಮ ಇಲಾಖೆಯು ಈ ಎಲ್ಲ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ನೀಡಿದಲ್ಲಿ ಪ್ರವಾಸೋದ್ಯಮದ ಅಭಿವೃದ್ದಿ ಸಾಧ್ಯವಿತ್ತು. ಆದರೆ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿಶೇಷ ಗಮನ ಹರಿಸದೇ ಇರುವುದು ವಿಷಾಧನೀಯ. ಈ ಕುರಿತು ಸಮಗ್ರ ಅದ್ಯಯನ ನಡೆಸಿ ಇಂತಹ ಪ್ರದೇಶಗಳ ಅಭಿವೃದ್ಧಿಯ ಕುರಿತು ವಿಶೇಷ ಯೋಜನೆಗಳನ್ನು ರೂಪಿಸಿ, ಸಮರ್ಪಕವಾಗಿ ಕಾರ್ಯಗತವಾದಲ್ಲಿ ಕುಮಟಾ ಜಗತ್ತಿನ ಭೂ ಪಟದಲ್ಲಿಯೇ ಗುರುತಿಸಿಕೊಳ್ಳುತ್ತದೆ ಎಂಬುದು ಹಲವು ಸಾರ್ವಜನಿಕರ ಅಭಿಪ್ರಾಯ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.