‘ಕೈ’ ಬಿಟ್ಟು ಜೆಡಿಎಸ್ ಪಾಲಾದ ಉ.ಕ ಜಿಲ್ಲೆ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಶಿರಸಿ: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸೀಟು ಹಂಚಿಕೆಯಲ್ಲಿ ಉತ್ತರ ಕನ್ನಡವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ರಾಜ್ಯ ಕಾಂಗ್ರೆಸ್ ನಿರ್ಧಾರದ ವಿರುದ್ಧ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಧಾನ ಭುಗಿಲೆದ್ದಿದ್ದು, ಇಲ್ಲಿನ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಜೆಡಿಎಸ್ ಗೆ ಸರಿಯಾದ ನೆಲೆ ಇಲ್ಲದೇ ಹೋದರೂ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅವರಿಗೆ ನೂರಾರು ಕಾರ್ಯಕರ್ತರು ಘೇರಾವ್ ಹಾಕಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯನ್ನು ಕಾಂಗ್ರೆಸ್ ತನ್ನ ವಶದಲ್ಲಿಟ್ಟುಕೊಂಡು ಜೆಡಿಎಸ್ ಸಹಕಾರದೊಂದಿಗೆ ಕ್ಷೇತ್ರವನ್ನು ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ರಾಜ್ಯ ನಾಯಕರು ಶೀಘ್ರದಲ್ಲಿ ಈ ಕುರಿತು ತಿರ್ಮಾನ ಕೈಗೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಇಲ್ಲಿನ ಕಾರ್ಯಕರ್ತರ ಮನದಾಳವನ್ನು ಅರಿತು ವರಿಷ್ಠರಿಗೆ ಕಾಂಗ್ರೆಸ್ ಗೆ ಉತ್ತರ ಕನ್ನಡ ಜಿಲ್ಲೆಯನ್ನು ನೀಡುವಂಗೆ ಮನವಿ ಮಾಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ರಾಜ್ಯಾಧ್ಯಕ್ಷ ದಿನೇಶ ಗುಂಡೂರಾವ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸುತ್ತೇನೆ. ಜಿಲ್ಲೆಯನ್ನು ಕಾಂಗ್ರೆಸ್ ಗೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷರ ಭರವಸೆ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಒಂದೊಮ್ಮೆ ಮನವಿಗೆ ಸ್ಪಂದಿಸದಿದ್ದಲ್ಲಿ ಕೆಪಿಸಿಸಿ ಎದುರು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರಮುಖ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.