ಕುಮಟಾದಲ್ಲಿ ಮಾ.16, 17ಕ್ಕೆ ಯಕ್ಷೋತ್ಸವ

ಕುಮಟಾ: ಇಲ್ಲಿನ ಯಕ್ಷಗಾನ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಮಾ.16 ಮತ್ತು 17 ರಂದು ಎರಡು ದಿನಗಳ ಯಕ್ಷೋತ್ಸವವನ್ನು ಪಟ್ಟಣದ ಹವ್ಯಕ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ನಿರ್ದೇಶಕ ಡಾ| ಜಿ.ಎಲ್.ಹೆಗಡೆ ತಿಳಿಸಿದ್ದಾರೆ.

ದಿ.16 ರಂದು ಸಾಯಂಕಾಲ 4 ರಿಂದ 5:30 ರವರೆಗೆ ಯಕ್ಷಗಾನ ಹಿಮ್ಮೇಳ ವೈಭವ ಕಾರ್ಯಕ್ರಮದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಸರ್ವೇಶ್ವರ ಮೂರೂರು ಭಾಗವಹಿಸುವರು. ಮದ್ದಳೆಯಲ್ಲಿ ಎ.ಪಿ. ಫಾಟಕ ಹಾಗೂ ಚಂಡೆಯಲ್ಲಿ ಭಾರ್ಗವ ಹೆಗ್ಗೊಡು ಪಾಲ್ಗೊಳ್ಳುವರು. ಸಭಾ ಕಾರ್ಯಕ್ರಮವನ್ನು ಚಂದನ ವಾಹಿನಿಯ ಜ್ಯೋತಿಷಿ ಡಾ| ಗೋಪಾಲಕೃಷ್ಣ ಶರ್ಮಾ ಉದ್ಘಾಟಿಸುವರು. ಬಾಳಿಗಾ ಕಾಲೇಜಿನ ಪ್ರಾಚಾರ್ಯ ಡಾ| ಯು.ಜಿ. ಶಾಸ್ತ್ರಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಜಿ.ಎಲ್. ಹೆಗಡೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಯಕ್ಷಗಾನ ಸಂಶೋಧಕ ಡಾ| ಗಣೇಶ ವಿ.ಜಿ. ಇವರನ್ನು ಸನ್ಮಾನಿಸಲಾಗುವುದು. ನಂತರ ಮಹಿಳಾ ಕಲಾವಿದರಿಂದ “ಸುದರ್ಶನ ವಿಜಯ” ಯಕ್ಷಗಾನ ನಡೆಯುವುದು. ಹಿಮ್ಮೇಳದಲ್ಲಿ ಸರ್ವೇಶ್ವರ, ಫಾಟಕ ಮತ್ತು ಭಾರ್ಗವ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ನಾಗಶ್ರೀ ಗೀಜಗಾರು, ಕಿರಣ ಪೈ, ಅರ್ಪಿತಾ ಹೆಗಡೆ ಹಾಗೂ ಸಹಕಲಾವಿದರು ಭಾಗವಹಿಸಲಿದ್ದಾರೆ.

17 ರಂದು ಸಾಯಂಕಾಲ 4 ಗಂಟೆಯಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಶಾಸಕ ದಿನಕರ ಶೆಟ್ಟಿ ಹಾಗೂ ವಿದ್ವಾನ್ ಉಮಾಕಾಂತ ಭಟ್ಟ ಭಾಗವಹಿಸುವರು. ನಂತರ ಶ್ರೀ ಹುಕ್ಲಮಕ್ಕಿ ಮೇಳದವರಿಂದ “ಹಿರಣ್ಯಾಕ್ಷ ವಧೆ” ಯಕ್ಷಗಾನ ನಡೆಯಲಿದೆ. ಕಲಾವಿದರಾದ ಡಾ| ಶ್ರೀಪಾದ ಹೆಗಡೆ, ಮಧು ಬಿಳಿಯೂರು ಮುಂತಾದವರು ಭಾಗವಹಿಸಲಿದ್ದಾರೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರೋತ್ಸಾಹಿಸಬೇಕೆಂದು ಅವರು ವಿನಂತಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.