ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು: ಜೆಡಿಎಸ್‌ಗೆ ಕ್ಷೇತ್ರ ನೀಡದಂತೆ ಆಗ್ರಹ


ಶಿರಸಿ: ರಾಜ್ಯದ ಸಮ್ಮಿಶ್ರ ಸರ್ಕಾರದ ನಡುವೆ ಸೀಟು ಹಂಚಿಕೆ ಗೊಂದಲ ನಡೆಯುತ್ತಿರುವಂತೆಯೇ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಭೆ ಸೇರಿ ಒಕ್ಕೊರಲಿನಿಂದ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಟಿಕೇಟ್ ಹಂಚಿಕೆಯಲ್ಲಿ ಉತ್ತರ ಕನ್ನಡವನ್ನು ಜೆಡಿಎಸ್ ಕೇಳಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ನಗರದ ಸಾಮ್ರಾಟ್ ಹೊಟೇಲ್‌ನ ವಿನಾಯಕ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಬಾರದು. ಹಾಗೆನಾದರೂ ಕೊಟ್ಟಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಕಾರ್ಯಕರ್ತರಿಗೆ ಪ್ರಚಾರಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಇದನ್ನು ಹೈಕಮಾಂಡಿಗೆ ಮನವಿ ಮಾಡಿಕೊಟ್ಟು ಕಾಂಗ್ರೆಸ್ ಪಾಲಿಗೆ ಟಿಕೇಟ್ ತಂದು ಕ್ಷೇತ್ರವನ್ನು ಗೆಲ್ಲುವಂತೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ದೇಶಪಾಂಡೆ ನಿಲ್ಲಬೇಕು: ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಬಹುತೇಕ ಬ್ಲಾಕ್ ಅಧ್ಯಕ್ಷರು, ವಿವಿಧ ಹುದ್ದೆಗಳ ಪ್ರಮುಖರು ಕಾಂಗ್ರೆಸ್ ಕ್ಷೇತ್ರವನ್ನು ಉಳಿಸಿಕೊಂಡು ಜಿಲ್ಲೆಯ ಕಾಂಗ್ರೆಸ್ ನ ಪ್ರಶ್ನಾತೀತ ನಾಯಕ ಆರ್.ವಿ.ದೇಶಪಾಂಡೆ ಅವರೇ ಅಭ್ಯರ್ಥಿಯಾಗಿ ನಿಂತು ಬಿಜೆಪಿಯನ್ನು ಸೋಲಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಕಾಂಗ್ರೆಸ್ಸಿನಲ್ಲಿರುವ ಬಣವನ್ನು ತೊರೆದು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಹಾಗೂ ಜೆಡಿಎಸ್ ಸಹಕಾರದೊಂದಿಗೆ ಜಿಲ್ಲೆಯನ್ನು ’ ಕೈ’ ವಶ ಮಾಡಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಚಿವ ಆರ‍್ವಿಡಿ, ಶಾಸಕರಾದ ಶಿವರಾಮ ಹೆಬ್ಬಾರ್, ಎಸ್.ಎಲ್.ಘೋಟ್ನೇಕರ್ , ಮಾಜಿ ಶಾಸಕರಾದ ಶಾರದ ಶೆಟ್ಟಿ, ಮಂಕಾಳ ವೈದ್ಯ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.