ಈ ಲೋಕಸಭಾ ಚುನಾವಣೆಗೆ ಒತ್ತಾಯಿಸಬೇಡಿ, ಸ್ಪರ್ಧಿಸಲ್ಲ: ಸಚಿವ ಆರ್ ವಿ ದೇಶಪಾಂಡೆ


ಶಿರಸಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಇಲ್ಲ. ಒತ್ತಾಯ ಮಾಡಬೇಡಿ ಎಂದು ಕಾರ್ಯಕರ್ತರಲ್ಲಿ ವಿನಂತಿಸಿದ್ದೇನೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಗ ಪ್ರಶಾಂತ್ ದೇಶಪಾಂಡೆ ಸಹಾ ಚುನಾವಣೆಗೆ ಸ್ಪರ್ಧಿಸಲ್ಲ. ರಾಜಕೀಯವಾಗಿ ಆಸಕ್ತಿ ಇದ್ದರೂ ಈ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆ ಟಿಕೇಟ್ ಕೊಟ್ಟಲ್ಲಿ ಗೆಲ್ಲುವು ಅಸಾಧ್ಯ. ಕಾಂಗ್ರೆಸ್ ನಿಂದ ಮಾತ್ರ ಕ್ಷೇತ್ರದಲ್ಲಿ ಗೆಲುವು ಸಾಧ್ಯ ಆದರೂ ಜೆಡಿಎಸ್ ಗೆ ಟಿಕೇಟ್ ನೀಡಬೇಕು ಎಂಬ ವಿಷಯ ಯಾಕೆ ಪ್ರಸ್ತಾಪ ಆಗಿದೆ ತಿಳಿಯುತ್ತಿಲ್ಲ.

ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್ ಕೈಯ್ಯಲ್ಲಿದ್ದು, ಜೆಡಿಎಸ್ ಅಸ್ತಿತ್ವದಲ್ಲಿ ಇಲ್ಲ. ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳಿಂದ 1.30 ಲಕ್ಷ ಮತಗಳನ್ನು ಮಾತ್ರ ಜೆಡಿಎಸ್ ಪಡೆದಿದ್ದು, ಕಾಂಗ್ರೆಸ್ 4.10 ಲಕ್ಷ ಮತಗಳನ್ನು ಪಡೆದಿದೆ. ಆದ್ದರಿಂದ ಕಾಂಗ್ರೆಸ್ ಸ್ಪರ್ಧೆ ಖಚಿತವಾಗಿದ್ದು, ಜೆಡಿಎಸ್ ಸಹಕಾರದಿಂದ ನಿಲ್ಲಲಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಿಂದ ಐದು ಬಾರಿ ಸಂಸದರಾದ ಅನಂತ್ ಕುಮಾರ ಹೆಗಡೆಯದು ಶೂನ್ಯ ಕೊಡುಗೆಯಾಗಿದ್ದು, ಮೋದಿ ಹೆಸರು ಹೇಳುವುದೇ ಅವರ ಸಾಧನೆಯಾಗಿದೆ. ಹೆಗಡೆ ಅವರದ್ದು ಕೇವಲ ಹಿಂದುತ್ವ, ವಿವಾದದ ರಾಜಕಾರಣವಾಗಿದೆ. ಅವರಿಂದ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಇಲ್ಲ. ರಾಹುಲ್ ಗಾಂಧಿ ಜಾತಿ ಮೂಲ ಕೇಳುವ ಅನಂತ ಕುಮಾರ ಹೆಗಡೆಗೆ ಸಂಸ್ಕಾರ ಇದ್ಯಾ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಶಾಸಕರಾದ ಶಿವರಾಮ ಹೆಬ್ಬಾರ್, ಎಸ್.ಎಲ್.ಘೋಟ್ನೇಕರ್, ಮಾಜಿ ಶಾಸಕ ಮಂಕಾಳ ವೈದ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಇದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.