ಸುವಿಚಾರ

ಸ್ತ್ರೀಃ ವಿನಶ್ಯತಿ ರೂಪೇಣ ಬ್ರಾಹ್ಮಣೋ ರಾಜಸೇವಯಾ
ಗಾವೋ ದೂರಪ್ರಚಾರೇಣ ಹಿರಣ್ಯಂ ಲೋಭಲಿಪ್ಸಯಾ ||

ತನ್ನಲ್ಲಿರುವ ಅತಿಶಯ ರೂಪವೇ ಹಲವಾರು ಸಂದರ್ಭಗಳಲ್ಲಿ ಸ್ತ್ರೀಗೆ ಮಾರಕವಾಗಿ ಪರಿಣಮಿಸುತ್ತದೆ. ಆ ಕಾರಣದಿಂದಾಗಿ ಆಕೆ ಅಪಾಯಗಳನ್ನು ತಂದುಕೊಳ್ಳುತ್ತಾಳೆ.
ಬ್ರಾಹ್ಮಣನಾದವನು ರಾಜತ್ವದ ಸೇವೆಗೆ ಇಳಿಯಬಾರದು. ಆತ ಕ್ಷಾತ್ರಕ್ಕೆ ಮಾರ್ಗದರ್ಶನ ಮಾಡಬಹುದೇ ಹೊರತು ಸೇವಕನಾಗಬಾರದು, ತನಗೆ ವಿಹಿತವಾದ ಆರುವಿಧವಾದ ಕರ್ಮಗಳನ್ನು ಮಾಡಿಕೊಂಡಿರಬೇಕು. ಬ್ರಾಹ್ಮಣನಾದವನು ರಾಜತ್ವದ ಸೇವೆಗೆ ಇಳಿದಲ್ಲೆಲ್ಲ ಆತನು ಅವಸಾನಗೊಂಡುದನ್ನು ಕಾಣುತ್ತೇವೆ. ಮಹಾಭಾರತದ ದ್ರೋಣರು ಇದಕ್ಕೊಂದು ಉದಾಹರಣೆಯೆನ್ನಬಹುದು. ಆಮೇಲೆ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಂದ್ರಗುಪ್ತನ ಗುರು ಚಾಣಕ್ಯನನ್ನು ನೋಡುವಾಗ ಅವನಲ್ಲಿ ಈ ಎಚ್ಚರವಿದ್ದುದನ್ನು ಗಮನಿಸುತ್ತೇವೆ. ಆತ ಎಂದಿಗೂ ರಾಜನ ಸೇವಕನಾಗಿರಲಿಲ್ಲ, ರಾಜಗುರುವಾಗಿದ್ದನು.
ಗೋವುಗಳು ದೂರ ದೂರ ಮೇಯುತ್ತ ಹೋದಂತೆಲ್ಲ ತಮ್ಮ ಜಾಡನ್ನು ಮರೆಯಬಹುದು, ಹುಲಿ ಸಿಂಹಾದಿಗಳ ಬಾಯಿಗೆ ಆಹಾರವಾಗಲೂಬಹುದು, ಇವತ್ತಿನ ಕಾಲದಲ್ಲಾದರೆ ದನಗಳ್ಳರ ಕೈಗೆ ಸಿಗಬಹುದು, ಹಾಗಾಗಿ ದೂರದೂರಕ್ಕೆ ಮೇಯಲು ಹೋಗುವುದು ಗೋವುಗಳಿಗೆ ಅಪಾಯಕಾರಿ.
ಇನ್ನೂ ಬೇಕು ಇನ್ನೂ ಬೇಕು ಅನ್ನುವ ಲೋಭಕ್ಕೆ ಸಿಲುಕಿ ಕೈಯಲ್ಲಿರುವ ಧನಕನಕಾದಿಗಳೂ ನಾಶವಾಗುತ್ತವೆ. ಸ್ವತಃ ಭೋಗಕ್ಕೂ ಒದಗದೆ ಇಹದಲ್ಲೂ ನಿರರ್ಥಕ, ದಾನಕ್ಕೆ ಒದಗದಾಗಿ ಪರದಲ್ಲೂ ನಿರರ್ಥಕವಾಗಿ ಆ ಹಣವು ನಾಶವಾಗುತ್ತದೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.