ಜಯಂತ್ ಕಾಯ್ಕಿಣಿಗೆ ‘ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ’ ಪ್ರಶಸ್ತಿ

ಗೋಕರ್ಣ: ಸಾಹಿತ್ಯ ಮತ್ತು ಕಲೋಪಾಸನೆಯ ಮೂಲ ಉದ್ದೇಶ ಮನಸ್ಸುಗಳನ್ನು ಬೆಸೆದು ಸ್ವ-ಹಿತವನ್ನು ಉಂಟುಮಾಡುವುದಾಗಿದೆ ಎಂದು ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ನುಡಿದರು.

ಮುಂಬೈನ ಹವ್ಯಕ ವೆಲ್‍ಫೇರ್ ಟ್ರಸ್ಟ್ ಕೊಡಮಾಡಿದ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಸಾಹಿತಿ ಮತ್ತು ಕಲಾವಿದರಾದವರು ಪ್ರಶಸ್ತಿ ಗೌರವಗಳಿಗೆ ಹಾತೊರೆಯುವಂತಾದಾಗ ಈ ಮೂಲ ಉದ್ದೇಶಕ್ಕೆ ಧಕ್ಕೆ ಬಂದೆರಗುತ್ತದೆ. ಇಂತಹ ವಿನೀತ ಭಾವವನ್ನು ಕನ್ನಡದ ಹವ್ಯಕ ಪರಂಪರೆಯಲ್ಲಿ ಕಾಣ ಬಹುದಾಗಿದೆ ಎಂದರು. ಪ್ರಶಸ್ತಿ ಪುರಸ್ಕಾರಗಳು ಸಾಹಿತಿಯ ವಿನೀತ ಭಾವವನ್ನು ವೃದ್ಧಿಸಬೇಕು. ಇದರಿಂದ ಮಾತ್ರ ಪಡೆದ ಪ್ರಶಸ್ತಿಯನ್ನು ಗೌರವಿಸಿದಂತಾಗುತ್ತದೆ. ಎಲ್ಲರನ್ನು ತನ್ನಲ್ಲಿ ಒಳಗೊಳ್ಳಬಲ್ಲ ಗೋಕರ್ಣದ ಜಾತ್ಯಾತೀತ ಹವ್ಯಕ ಪರಿಸರ ನನ್ನನ್ನು ಬೆಳೆಸಿತು. ಮುಂಬೈ ಮಹಾನಗರಿ ನನ್ನ ಸಂವೇದನೆಗಳನ್ನು ರೂಪಿಸುವ ಕಾರ್ಯ ಮಾಡಿತು. ಕಾರಣ ಈ ಎರಡಕ್ಕೂ ನಾನು ಆಜೀವ ಋಣಿಯಾಗಿದ್ದೇನೆ. ಈ ಪ್ರಶಸ್ತಿಯಿಂದ ಇವೆರಡರ ಮಧ್ಯೆ ಅವಿನಾಶಿನಿಯಾದ ಸೇತುವೆಯೊಂದು ನಿರ್ಮಾಣವಾದಂತಾಗಿದೆ ಎಂದು ಜಯಂತ್ ಹೇಳಿದರು.

ಮುಂಬೈ ನಾನಾವತಿ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ತಜ್ಞ ಡಾ.ನಾಗರಾಜ ಹುಯಿಲಗೋಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಜಯಂತ್ ಅವರ ಸಾಹಿತ್ಯ ಕರ್ನಾಟಕ ಅಥವಾ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಅದೊಂದು ಲೋಕ ಸಾಹಿತ್ಯ ಎನ್ನುವುದನ್ನು ಇತ್ತೀಚಿನ ದಕ್ಷಿಣ ಏಷ್ಯಾ ಪ್ರಶಸ್ತಿ ಋಜುವಾತು ಮಾಡಿದೆ. ಇವರ ಎಲ್ಲ ಸಾಹಿತ್ಯಗಳು ವಿಶ್ವ ಸಮುದಾಯವನ್ನು ಮುಟ್ಟುವ ವ್ಯವಸ್ಥೆ ಆಗಲಿ ಎಂದು ಹಾರೈಸಿದರು. ಹವ್ಯಕ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಪಿ.ಭಾಗವತ ಅಧ್ಯಕ್ಷತೆ ವಹಿಸಿ ವಿಶ್ವ ಮಾನ್ಯ ಸಾಹಿತಿಯೋರ್ವರಿಗೆ ಈ ಪ್ರಶಸ್ತಿ ನೀಡಲಾಗುತ್ತಿರುವುದು ನಮ್ಮ ಸಂಸ್ಥೆಯ ಹಾಗೂ ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.

ಮುಂಬೈ ಕನ್ನಡ ಪತ್ರಕರ್ತರ ಸಂಘ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮಾತನಾಡಿದರು. ಹವ್ಯಕ ಸಂದೇಶ ಮಾಸಿಕದ ಸಂಪಾದಕಿ ಅಮಿತಾ ಭಾಗವತ, ಪ್ರಶಸ್ತಿ ಸಮಿತಿ ಸಂಚಾಲಕಿ ತನುಜಾ ಹೆಗಡೆ, ಟ್ರಸ್ಟ್ ಉಪಾಧ್ಯಕ್ಷ ಸಂಜಯ ಭಟ್ಟ, ಕೋಶಾಧಿಕಾರಿ ಎ.ಜಿ. ಭಟ್ಟ, ಕಾರ್ಯದರ್ಶಿ ನಾರಾಯಣ ಅಕದಾಸ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.