ಕೇಂದ್ರ ಸರ್ಕಾರದ ಕ್ರಮ, ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತದ್ದಾಗಿದೆ: ಎನ್.ಎಸ್.ಹೆಗಡೆ

ಕುಮಟಾ: ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ ಮಿಶ್ರಾ ಸಲ್ಲಿಸಿದ ಬೇಡಿಕೆಯನ್ನು ಪ್ರಧಾನಿ ಮೋದಿಯವರು ಪರಿಗಣಿಸಿರುವುದು ತೀರಾ ವಿಷಾದನೀಯ. ಪ್ರಜಾಪ್ರಭುತ್ವ ಅಂಗ ಸಂಸ್ಥೆಯ ಕಾರ್ಯ ನಿರ್ವಹಣೆಗೆ ತೊಂದರೆಯೊಡ್ಡುವ ಕೇಂದ್ರ ಸರಕಾರದ ಕ್ರಮ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತದ್ದಾಗಿದ್ದು, ಇದು ಖಂಡನೀಯ ಎಂದು ವಕೀಲರ ಸಂಘದ ತಾಲೂಕಾಧ್ಯಕ್ಷ ಎನ್.ಎಸ್.ಹೆಗಡೆ ಹೇಳಿದರು.

ಮಂಗಳವಾರ ನ್ಯಾಯಾಲಯದ ವಿಶ್ರಾಂತಿ ಕೊಠಡಿಯಲ್ಲಿ ತಾಲೂಕಾ ವಕೀಲರ ಸಂಘ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆಯನ್ನು ಉನ್ನತೀಕರಿಸುವ ಉದ್ದೇಶದಿಂದ ವಕೀಲರಿಗೆ ವಿಮೆ, ವಾಚನಾಲಯ, ಸುಸಜ್ಜಿತ ಕಟ್ಟಡ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿತ್ತು.

ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಾಧೀಶರಿಗೆ ಕೆಲ ವಕೀಲರು ಹಾಗೂ ಹಿತಾಸಕ್ತಿಗಳಿಂದ ಆಗುವ ತೊಂದರೆಯನ್ನು ವಕೀಲರ ಸಂಘ ಖಂಡಿಸುತ್ತದೆ. ಕೇಂದ್ರ ಆಯವ್ಯಯದಲ್ಲಿ ವಕೀಲರು ಹಾಗೂ ಕಕ್ಷಿದಾರರ ಕಲ್ಯಾಣಕ್ಕೆ 5000 ಕೋಟಿ ರೂ. ಮೀಸಲಿಡಬೇಕು. ವಕೀಲರ ಕುಟುಂಬಕ್ಕೆ ವಿಮೆ ಹಾಗೂ ವಕೀಲಿ ವೃತ್ತಿಗೆ ಬರುವ ಹೊಸಬರಿಗೆ ಮಾಸಿಕ 10,000ರೂ. ನೀಡಬೇಕು. ವೃತ್ತಿ ನಿರತ ವಕೀಲರ ಅಕಾಲಿಕ ಮರಣದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ಹಾಗೂ ಹರಿಯಾಣ ಮಾದರಿಯಲ್ಲಿ ವಸತಿ ಯೋಜನೆ ರೂಪಿಸಿಕೊಡಬೇಕು. ಕಾನೂನು ಸೇವಾ ಪ್ರಾಧಿಕಾರಕ್ಕೆ, ವಿವಿಧ ಆಯೋಗ, ಪ್ರಾಧಿಕಾರ ಮಂಡಳಿಗಳಿಗೆ ನೇಮಕಾತಿ ಮಾಡುವಾಗ ವಕೀಲರಿಗೆ ಅವಕಾಶವಿರುವಂತೆ ತಿದ್ದುಪಡಿಯಾಗಬೇಕು. ಈ ಕುರಿತು ತಾಲೂಕಾ ವಕೀಲರ ಸಂಘ ಠರಾಯಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲಿ ಸಂಘದ ಉಪಾಧ್ಯಕ್ಷ ಎಂ ಎಸ್ ಭಟ್ಟ, ಕಾರ್ಯದರ್ಶಿ ವಸಂತ ಹುಲಸ್ವಾರ, ವೆಂಕಟೇಶ ಗೌಡ, ಹಾಗೂ ಸದಸ್ಯರಾದ ಆರ್ ಜಿ ನಾಯ್ಕ, ಶಂಕರಮೂರ್ತಿ ಶಾಸ್ತ್ರಿ, ವಿಶ್ವಾಸ ಹೆಗಡೆ, ಶ್ರೀನಿವಾಸ ನಾಯ್ಕ, ವೆಂಕಟೇಶ ಶಾನಭಾಗ, ಪ್ರಕಾಶ ಹೆಗಡೆ, ಡಿ ಎಚ್ ಪಟಗಾರ, ರಾಘು ನಾಯ್ಕ, ಮೀರಾ ನಾಯ್ಕ, ಸವಿತಾ ಪುಲ್ಕರ್, ಅನಿತಾ ಕಾಮತ್, ಸೀತಾರಾಮ ಹರಿಕಂತ್ರ, ಮೀನಾಕ್ಷಿ ಪಟಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.