ಅಂಬಿಗರು ಮೀನುಗಾರಿಕೆಯಲ್ಲಿ ಸುಂದರ ಬದುಕು ಕಂಡುಕೊಂಡವರು; ರಾಮನಾಥ ಶಾನಭಾಗ

ಕುಮಟಾ: ತಾಲೂಕಿನ ಪಾವನಗಂಗಾ ಯುವಕ ಸಂಘದ ಎರಡು ದಿನದ ರಜತ ಮಹೋತ್ಸವ ಕಾರ್ಯಕ್ರಮ ಹೆಗಡೆಯ ಅಂಬಿಗರ ಕೇರಿಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಕುಮಟಾ ಎ.ಪಿ.ಎಂ.ಸಿ ಅಧ್ಯಕ್ಷ ರಾಮನಾಥ (ಧೀರೂ) ಶಾನಭಾಗ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅಂಬಿಗರು ಬಹಳ ಶಾಂತ ಸ್ವಭಾವದವರು. ತಮ್ಮ ಕುಲಕಸುಬಾದ ಮೀನುಗಾರಿಕೆಯಲ್ಲಿ ಸುಂದರ ಬದುಕು ಕಂಡುಕೊಂಡವರು. ಅಂಬಿಗ ಸಮಾಜದ ಯುವಕರು ತಮ್ಮ ಯುವಕ ಸಂಘದ ರಜತ ಮಹೋತ್ಸವ ಆಚರಿಸುತ್ತಿದ್ದಾರೆ ಎಂಬುದು ಉತ್ತಮ ಸಂಘಟನೆಗೆ ಪ್ರತ್ಯಕ್ಷ ಸಾಕ್ಷಿ. ಅಂಬಿಗ ಸಮಾಜದ ವಿದ್ಯಾರ್ಥಿಗಳು ಇತ್ತೀಚಿಗೆ ಶಿಕ್ಷಣದಲ್ಲಿ ಮುಂದೆ ಬರುತ್ತಿರುವದು ಸಂತಸದ ಸಂಗತಿ. ಹೆಗಡೆ ಅಂಬಿಗ ಕೇರಿಯ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಉತ್ತಮ ಸ್ಥಾನ ಪಡೆದವರಿಗೆ ತಾನು 5 ಸಾವಿರ ಬಹುಮಾನ ನೀಡುವುದಾಗಿ ವೇದಿಕೆಯಲ್ಲಿ ಘೋಷಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಅಂಬಿಗ ಚೌಡಯ್ಯನವರ ಸಮಾಜ ಅಧ್ಯಯನ ಅಕಾಡೆಮಿಯ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್‍ಎಸ್ ಗಂಗೆಮನೆ ಮಾತನಾಡಿ, ನಮ್ಮ ಅಂಬಿಗ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆಬರಬೇಕಿದೆ. ನಾವು ಕಲ್ಬುರ್ಗಿಯಲ್ಲಿ ಹಾಗೂ ರಾಜ್ಯದ ಇತರೆಡೆ ಅನೇಕ ಕಾರ್ಯಕ್ರಮ ನಡೆಸುತ್ತಿದ್ದೇವೆ ಆದರೆ ಉತ್ತರಕನ್ನಡದಲ್ಲೇ ನಮ್ಮ ಸಂಘಟನೆ ಹಿಂದಿದೆ ಎಂದು ಬೇಸರ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ನಮ್ಮ ಸಂಘಟನೆ ಬಲಪಡಿಸೋಣ ಎಂಬ ಆಶಯ ವ್ಯಕ್ತಪಡಿಸಿದರು.

ಶಿಕ್ಷಕ ರವೀಂದ್ರ ಭಟ್ಟ ಸೂರಿ ಮಾತನಾಡಿ, ಇಲ್ಲಿಯ ಯುವಕರು ಅದ್ಭುತ ಕಾರ್ಯಕ್ರಮ ಸಂಘಟಿಸಿದ್ದಾರೆ. ನಿಮ್ಮಲಿರುವ ಸಂಘಟನೆಯನ್ನು ಸಮಾಜಸೇವೆಗೂ ಬಳಸಿಕೊಳ್ಳಿ. ಜೊತೆಗೆ ಪ್ರತಿವರ್ಷವೂ ನಿಮ್ಮ ಯುವಕ ಸಂಘದಿಂದ ಸಮಾಜ ಸೇವೆಗೆ ಪೂರಕವಾದ ಆರೋಗ್ಯ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಮನರಂಜನಾ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮೀತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ನಿಮ್ಮ ಊರಿನ ಸಮಸ್ಯೆಗಳಿಗೆ ನಾನು ಕೂಡಲೇ ಸ್ಪಂದಿಸುತ್ತೇನೆ. ಆರೋಗ್ಯ ಸ್ಥಾಯಿ ಸಮೀತಿ ಅದ್ಯಕ್ಷನಾದ ನಂತರ ಅನೇಕ ಅಭಿವೃದ್ಧಿ ಕಾರ್ಯಕೈಗೊಂಡಿದ್ದೇನೆ. ಈಗಾಗಲೇ ಕುಮಟಾ ಸರ್ಕಾರಿ ಆಸ್ಪತ್ರೆಯ ಆವರಣ ಬಹಳ ಉತ್ತಮವಾಗಿ ಮಾಡಲಾಗಿದೆ. ಕೇಂದ್ರಸರ್ಕಾರದ ಜನೌಷಧಿ ಕೇಂದ್ರದ ಔಷಧಿ ಮಳಿಗೆ ಕೂಡ ತೆರೆಯಲಾಗಿದೆ. ಜನರು ಅದರ ಸದುಪಯೋಗ ಪಡೆದುಕೊಳಿ. ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳನ್ನು ತಮ್ಮಲ್ಲಿಗೇ ಕರೆಸಿ, ನಿಮ್ಮ ಸಮ್ಮುಖದಲ್ಲೇ ಸಮಸ್ಯೆಗಳನ್ನು ತಿಳಿಸುವ ಕಾರ್ಯ ಮಾಡುತ್ತೇನೆ ಎಂದರು.

ಹೆಗಡೆ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಪಟಗಾರ, ಹಿರೇಬೀರ ದೇವಾಲಯದ ಮುಖ್ಯ ಅರ್ಚಕ ಮಹೇಶ ಗುನಗ, ಮಿರ್ಜಾನ ಗ್ರಾ.ಪಂ ಸದಸ್ಯ ಗಣೇಶ ಅಂಬಿಗ, ಸದಸ್ಯ ಶಿವಾನಂದ ಪಟಗಾರ, ಎಲ್‍ಎಸ್ ಅಂಬಿಗ, ಅಳಕೋಡ ಸದಸ್ಯ ವಿನಾಯಕ ಅಂಬಿಗ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಸನ್ಮಾನದ ಜೊತೆಗೆ ಯುವಕ ಸಂಘವನ್ನು ಹುಟ್ಟು ಹಾಕಿದ ಹಿರಿಯ ರಂಗಭೂಮಿ ನಿರ್ದೇಶಕ ಕೇಶವ ನಾಯ್ಕರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಿಕ್ಷಕ ಎಂ ಎಂ ನಾಯ್ಕ ನಿರೂಪಿಸಿದರು. ಟಿ ಪಿ ಅಂಬಿಗ ಸ್ವಾಗತಿಸಿದರು. ಸತೀಶ ಅಂಬಿಗ, ಶ್ರೀಧರ ಅಂಬಿಗ, ಸಂದೀಪ, ಪ್ರಭಾಕರ, ಬಾಲಕೃಷ್ಣ ಅಂಬಿಗ ಸೇರಿದಂತೆ ಹಲವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.