ಹಿಂದೂ ಧರ್ಮ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಧರ್ಮ; ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಶಿರಸಿ: ಹಿಂದೂ ಧರ್ಮವು ಈಡೀ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಧರ್ಮವೆಂದು ಕರೆಸಿಕೊಳ್ಳುತ್ತಿದೆ. ಆದರೆ ಜಾತಿಯ ಕನ್ನಡಕ ಹಾಕಿಕೊಂಡವರು ಹಿಂದೂ ಧರ್ಮದಲ್ಲಿ ಒಗ್ಗಟ್ಟಿಲ್ಲ, ಅದು ಹಿಂದುಳಿದ ಧರ್ಮ ಎನ್ನುತ್ತಾರೆ. ಇದು ಮೂರ್ಖರ ಪ್ರಲಾಪ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ತಾಲೂಕಿನ ವಕ್ಕಲಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಜಗದೀಶ್ವರ ದೇವರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಸ್ಲಿಂ, ಕ್ರೈಸ್ತ ಧರ್ಮದಲ್ಲಿ ಒಬ್ಬನೇ ದೇವರು ಅದಕ್ಕೇ ಅವರು ಸಂಘಟಿತರಾಗಿದ್ದಾರೆ. ಹಿಂದುಗಳಲ್ಲಿ ನೂರಾರು ದೇವತೆಗಳು, ಜಾತಿ ಹೆಸರಲ್ಲಿ ಒಡೆದು ಹೋಗಿದ್ದೇವೆ ಎಂದು ಟೀಕಿಸುವವರು ಮೂರ್ಖರು ಎಂದು ಆರೋಪಿಸಿದರು.

ಪ್ರಕೃತಿಯನ್ನು ಆರಾಧಿಸುವ ಜನ ನಾವು. ನಮ್ಮಲ್ಲಿ ಜಾತೀಯತೆ ಇದೆ ಎನ್ನುವುದು ಸುಳ್ಳು. ನಾವು ಆರಾಧಿಸುವ ರಾಮ ಕ್ಷತ್ರಿಯ, ಕೃಷ್ಣ ಗೊಲ್ಲ, ರಾಮಾಯಣ ಬರೆದವ ವಾಲ್ಮೀಕಿಯನ್ನೂ ಮಹರ್ಷಿ ಎನ್ನಲಾಗಿದೆ.‌ ವೇದಗಳನ್ನು ವಿಂಗಡಿಸಿದ ವ್ಯಾಸರೂ ಬ್ರಾಹ್ಮಣರಾಗಿರಲಿಲ್ಲ. ಅರ್ಹತೆ ಆಧಾರದ ಮೇಲೆ ಅವರಿಗೆ ಮಾನ್ಯತೆ ನೀಡಿದ ಧರ್ಮ ನಮ್ಮದು ಎಂದರು. ಹಿಂದೂ ಧರ್ಮದಲ್ಲಿ ನಾವು ಯೋಗ್ಯತೆ ಇದ್ದವರನ್ನು ಪೂಜಿಸುತ್ತೇವೆಯೇ ಹೊರತು, ಉಳಿದ ಧರ್ಮೀಯರಂತೆ ಜಾತಿ ನೋಡಿ ಅವರನ್ನು ದೇವರೆಂದು ಹೇಳುವುದಿಲ್ಲ. ಹೀಗಾಗಿಯೇ ಇಂದು ನಮ್ಮ ಹಿಂದೂ ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಂದು ಧರ್ಮದವರೂ ಸಹ ಹಿಂದೂ ಧರ್ಮವನ್ನು ಗೌರವಿಸಬೇಕು ಎಂದರು.

ರಾಷ್ಟ್ರೀಯ ತಂಡದ ಕಬ್ಬಡಿ ಆಟಗಾರ ರಿಷಾಂಕ ದೇವಾಡಿಗ, ಜಿಲ್ಲಾ ಪಂಚಾಯತ ಸದಸ್ಯೆ ಪ್ರಭಾವತಿ ಗೌಡ, ಶಿರಸಿ ತಾಲೂಕು ಪಂಚಾಯತ ಉಪಾಧ್ಯಕ್ಷ ಚಂದ್ರು ಎಸಳೆ, ಕರೆಒಕ್ಕಲು ಸಮಾಜದ ಜಿಲ್ಲಾಧ್ಯಕ್ಷ ನಾರಾಯಣ ಗೌಡ, ಜಗದೀಶ್ವರ ದೇವಾಲಯದ ಸ್ವಾಗತ ಸಮಿತಿ ಅಧ್ಯಕ್ಷ ಕೆರಿಯಾ ನಾಗಾ ಗೌಡ, ಉಪಸಮಿತಿಯ ಅಧ್ಯಕ್ಷ ಕೃಷ್ಣ ಎಸಳೆ ಹಾಗೂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಗೌಡ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.