ಶಿವರಾತ್ರಿ ಜಾತ್ರಾ ಮಹೋತ್ಸವ: ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಪ್ರೀತಿ ಗೆಹ್ಲೋಟ್


ಗೋಕರ್ಣ: ಕುಮಟಾ ವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಸೋಮವಾರ ಮುಂಜಾನೆ ಭೇಟಿ ನೀಡಿ ಶಿವರಾತ್ರಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದಂತೆ ವಿವಿಧ ವ್ಯವಸ್ಥೆಗಳಿಗೆ ನಿಗದಿ ಪಡಿಸಿದ ಸ್ಥಳಗಳನ್ನು ಪರಿಶೀಲಿಸಿದರು. ಪ್ರಮುಖವಾಗಿ ಪಾರ್ಕಿಂಗ್, ಸಂಚಾರ ವ್ಯವಸ್ಥೆ, ಬಸ್ ನಿಲ್ದಾಣಕ್ಕೆ, ತೆರಳಿ ಅಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಯ ಕುರಿತು ಸೂಚಿಸಿದರು.

ಏಕಮುಖ ಸಂಚಾರ ವ್ಯವಸ್ಥೆಯ ಹೊರ ಹೋಗುವ ರಸ್ತೆ ಪಕ್ಕದಲ್ಲಿ ಮೀನು ಮಾರುಕಟ್ಟೆ ಇದ್ದು, ರಸ್ತೆ ಎರಡು ಬದಿಯಲ್ಲಿ ಮೀನು ಮಾರಾಟ ನೆಡೆಯುತ್ತಿರುವುದರಿಂದ ಜಾತ್ರೆಯ ವೇಳೆಯಲ್ಲಿ ಸಂಚಾರ ದಟ್ಟನೆಯಾಗಿ ಸಂಚಾರಕ್ಕೆ ತೊಂದರೆಯಾಗುವ ಕಾರಣ ಆ ದಿನಗಳಲ್ಲಿ ಬೇರೆ ಕಡೆ ಮೀನು ಮಾರಾಟ ಸ್ಥಳವನ್ನು ನಿಗದಿ ಪಡಿಸುವ ಕುರಿತು ಚರ್ಚಿಸಿದರು. ಈ ಬಗ್ಗೆ ಪಿ.ಎಸ್.ಐ. ಸಂತೋಷ ಕುಮಾರ ಪ್ರತಿಕ್ರಿಯಿಸಿ ಮೀನು ಮಾರಟಗಾರರು ಮತ್ತು ಮೀನುಗಾರಿಕ ಇಲಾಖೆ ಅಧಿಕಾರಿಗಳ ಸಭೆ ಕರೆದು ಮೀನುಗಾರರ ಮನ ಒಲಿಸಿ ಬೇರೆ ಕಡೆ ಸ್ಥಳಾಂತರಕ್ಕೆ ಮನವಿ ಮಾಡುವುದು ಸೂಕ್ತ ಎಂದರು. ಅದರಂತೆ ಕ್ರಮ ಕೈಗೊಳ್ಳಲು ಉಪವಿಭಾಗಾಧಿಕಾರಿ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

ಕೆಲ ಸ್ಥಳೀಯರು ಮೀನು ಮಾರುಕಟ್ಟೆ ಯನ್ನು ಬೇರೆಡಿಗೆ ಶಾಶ್ವತವಾಗಿ ಸ್ಥಳಾಂತರಿಸ ಬೇಕು, ಮೀನು ಮಾರಾಟಗಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲೂ ಧನ ಸಹಾಯ ನೀಡಲು ಸಿದ್ದರಿರುವುದಾಗಿ ತಿಳಿಸಿದರು. ತಾಲೂಕಾ ಪಂಚಾಯತ ಕಾರ್ಯನಿರ್ವಾಣಾಧಿಕಾರಿ ಸಿ.ಟಿ.ನಾಯ್ಕ, ಪಿ.ಡಿ.ಓ ಬಾಲಕೃಷ್ಣ ನಾಯ್ಕ, ಶ್ರೀಧರ ಬೋಮಕರ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.