ಯಕ್ಷಗಾನ ನಾಡಿನ ಶ್ರೇಷ್ಠ ಕಲೆ; ಶಾಸಕ ದಿನಕರ ಶೆಟ್ಟಿ

ಕುಮಟಾ: ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಸಾಭಿವ್ಯಕ್ತಿಗೆ ಯಕ್ಷಗಾನವು ನಾಡಿನ ಶ್ರೇಷ್ಠ ಕಲೆಯಾಗಿದೆ. ಚಿಣ್ಣರಿಗಾಗಿಯೇ ಯಕ್ಷಗಾನ ಸ್ಪರ್ಧೆಯನ್ನು ಆಯೋಜಿಸಿರುವುದು ಉತ್ತಮ ಯೋಚನೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

ಶನಿವಾರ ರಾತ್ರಿ ಕಾಗಾಲದ ರೈತ ಸೇವಾ ಸಹಕಾರಿ ಸಂಘದ ಆವರಣದಲ್ಲಿ ಶ್ರೀ ಶಕ್ತಿವೀರಮಾರುತಿ ಚಿಣ್ಣರ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ಪಾಲಕರು ಹಾಗೂ ಊರನಾಗರಿಕರ ಸಹಯೋಗದಲ್ಲಿ ಹಮ್ಮಿಕೊಂಡ ಎರಡು ದಿನಗಳ ಚಿಣ್ಣರ ಯಕ್ಷಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯರ ಹಾಗೂ ಕಿರಿಯರ ಯಕ್ಷಗಾನ ಪ್ರದರ್ಶನಗಳು ನಡೆಯುವುದು ಮಾಮೂಲು ಸಂಗತಿ. ಆದರೆ ಚಿಣ್ಣರ ವಿವಿಧ ಮೇಳಗಳನ್ನು ಕಟ್ಟಿ ಅವರನ್ನು ತರಬೇತುಗೊಳಿಸಿ ಸ್ಪರ್ಧೆಗೆ ಇಳಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇಂಥ ವಿನೂತನ ಪ್ರಯತ್ನಗಳು ಹೆಚ್ಚಲಿ. ನನ್ನಿಂದಾದ ಎಲ್ಲ ಸಹಕಾರ ಕೊಡುತ್ತೇನೆ ಎಂದು ಸಂಘಟಕರನ್ನು ಶಾಸಕ ಶೆಟ್ಟಿ ಹುರಿದುಂಬಿಸಿದರು.

ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಗಾಲ ಪಂಚಾಯಿತಿ ಉಪಾಧ್ಯಕ್ಷ ರವಿ ಪಂಡಿತ, ಸದಸ್ಯೆ ಚಂದ್ರಕಲಾ ಎಂ ನಾಯ್ಕ, ಬಾಡ ಪಂಚಾಯಿತಿ ಉಪಾಧ್ಯಕ್ಷ ರವಿಕಾಂತ ಎಸ್. ನಾಯ್ಕ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಮೂರೂರು ಪ್ರಗತಿ ವಿದ್ಯಾಲಯದ ಪ್ರಾಚಾರ್ಯ ಎಂ.ಜಿ.ಭಟ್ಟ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ಆರ್. ನಾಯ್ಕ, ಸಂಘಟಕ ಶ್ರೀ ಶಕ್ತಿವೀರಮಾರುತಿ ಚಿಣ್ಣರ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ಮಾರುತಿ ಪಿ. ನಾಯ್ಕ, ಮಂಡಳಿಯ ಅಧ್ಯಕ್ಷೆ ಮಾಲತಿ ಎಂ. ನಾಯ್ಕ ಇದ್ದರು.

ಸ್ಪರ್ಧೆಯಲ್ಲಿ ಗುಡೇಅಂಗಡಿಯ ಶ್ರೀ ಕಾಂಚಿಕಾಂಬ ಚಿಣ್ಣರ ಯಕ್ಷಗಾನ ಮಂಡಳಿ, ಮಾದರಿರಸ್ತೆಯ ಶ್ರೀ ಮಕರ ಜ್ಯೋತಿ ಚಿಣ್ಣರ ಯಕ್ಷಗಾನ ಮಂಡಳಿ, ಶ್ರೀ ಶಕ್ತಿವೀರಮಾರುತಿ ಚಿಣ್ಣರ ಯಕ್ಷಗಾನ ಮಂಡಳಿ ಕಾಗಾಲ’ಎ’ ಹಾಗೂ ಶ್ರೀ ಶಕ್ತಿವೀರಮಾರುತಿ ಚಿಣ್ಣರ ಯಕ್ಷಗಾನ ಮಂಡಳಿ ಕಾಗಾಲ’ಬಿ` ತಂಡಗಳು ಪೈಪೋಟಿ ನಡೆಸಿ ಸಭಿಕರನ್ನು ರಂಜಿಸಿದರು. ‘ಮೀನಾಕ್ಷಿ ಕಲ್ಯಾಣ’, ‘ಜಾಂಬವತಿ ಕಲ್ಯಾಣ’, ‘ಗದಾಯುದ್ಧ’, ‘ಚಕ್ರಚಂಡಿಕೆ’ ಪ್ರಸಂಗಗಳನ್ನು ಮಕ್ಕಳು ಆಡಿತೋರಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.