ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ: ದೈವಜ್ಞ ವಾಹಿನಿ ತಂಡಕ್ಕೆ ಚಾಂಪಿಯನ್ ಪಟ್ಟ

ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಶನ್ ಸ್ಕೂಲ್ ಮೈದಾನದಲ್ಲಿ ರವಿವಾರ ನಡೆದ ದೈವಜ್ಞ ಬ್ರಾಹ್ಮಣ ಸಮಾಜದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೊನ್ನಾವರದ ದೈವಜ್ಞ ವಾಹಿನಿ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿ ಟ್ರೋಫಿಯನ್ನು ತನ್ನದಾಗಿಸಿಕೊಂಡರೆ, ಕುಮಟಾದ ಜೈಹೋ ತಂಡ ರನ್ನರ್‍ಅಪ್ ಸ್ಥಾನ ಪಡೆದುಕೊಂಡಿದೆ.

ಇಲ್ಲಿನ ಬಗ್ಗೋಣ ದೈವಜ್ಞ ಗೆಳೆಯರ ಬಳಗದವರು ಆಯೋಜಿಸಿದ 5ನೇ ವರ್ಷದ ಜಿಲ್ಲಾ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ ಒಟ್ಟೂ 14 ತಂಡಗಳು ಭಾಗವಹಿಸಿದ್ದವು. ರವಿವಾರ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಹೊನ್ನಾವರದ ಸಚೀನ ಶೇಟ್ ನಾಯಕತ್ವದ ದೈವಜ್ಞ ವಾಹಿನಿ ಹಾಗೂ ಕುಮಟಾದ ಸೋಮನಾಥ ಶೇಟ್ ನಾಯಕತ್ವದ ಜೈಹೋ ತಂಡದ ನಡುವೆ ನಡೆದ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗಿ ತೀವ್ರ ಪೈಪೊಟಿ ನಡೆದಿತ್ತು. ಜೈಹೋ ತಂಡ 53 ರನ್ ಕಲೆ ಹಾಕಿದ್ದು, ಹೊನ್ನಾವರದ ತಂಡ ಸುಲಭವಾಗಿ 54 ರನ್ ಕಲೆ ಹಾಕಿ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿ ಟ್ರೋಫಿಯನ್ನು ತನ್ನದಾಗಿಸಿಕೊಂಡು, 7,000 ರೂ. ನಗದು ಹಾಗೂ ಆಕರ್ಷಕ ಫಲಕ ಪಡೆದುಕೊಂಡಿದೆ. ಕುಮಟಾದ ಜೈಹೋ ತಂಡ ರನ್ನರ್ ಆಪ್ ಸ್ಥಾನ ಪಡೆದುಕೊಂಡು, 4.000 ರೂ ನಗದು ಹಾಗೂ ಆಕರ್ಷಕ ಫಲಕ ಪಡೆದುಕೊಂಡಿತು.

ಪಂದ್ಯಾವಳಿಯ ಬಹುಮಾನ ವಿತರಕರಾಗಿ ಆಗಮಿಸಿದ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಮಧುಸೂದನ ಶೇಟ್ ಮಾತನಾಡಿ, ಕ್ರೀಡೆ ವಾಸ್ತವಿಕವಾದ ಪಾಠವನ್ನು ಕಲಿಸುತ್ತದೆ. ನಮ್ಮಲ್ಲಿರಬುಹುದಾದ ಸಣ್ಣತನವನ್ನು ನಿವಾರಿಸುತ್ತದೆ. ಕ್ರೀಡೆಯಲ್ಲಿ ದ್ವೇಷ ಹಾಗೂ ಹಿಂಸೆಗಳಿಲ್ಲದೇ ಕ್ರೀಡಾ ಮನೋಭಾವದಿಂದ ಪಾಲ್ಗೊಂಡಾಗ ಮಾತ್ರ ಅರ್ಥ ಪೂರ್ಣವಾಗುತ್ತದೆ. ಬಗ್ಗೋಣದ ದೈವಜ್ಞ ಗೆಳಯರ ಬಳಗದವರು ಪ್ರತಿವರ್ಷ ಪಂದ್ಯಾವಳಿಯನ್ನು ಉತ್ತಮವಾಗಿ ಸಂಘಟನೆ ಮಾಡಿಕೊಂಡು ಬಂದಿರುವುದು ಶ್ಲಾಘನಿಯ ಎಂದರು.

ಪತ್ರಕರ್ತ ರಾಘವೇಂದ್ರ ಜಿ. ದಿವಾಕರ ಮಾತನಾಡಿ, ಕ್ರೀಡಾಪಟುಗಳು ಕ್ರೀಡೆಯಲ್ಲಿ ಆಸಕ್ತಿಯಿಂದ ಬಾಗವಹಿಸಿದರೆ ಕ್ರೀಡಾ ಶಿಸ್ತನ್ನು ಪಾಲಿಸಬಹುದು. ಅಲ್ಲದೇ ದೈವಜ್ಞ ಬ್ರಾಹ್ಮಣ ಸಮಾಜದ ಯುವಕರು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಣದಲ್ಲಿ ಆಸಕ್ತಿ ನೀಡಿದರೆ, ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ. ಇಲ್ಲಿನ ದೈವಜ್ಞ ಗೆಳಯರ ಬಳಗ ಕ್ರೀಡೆ ಮೂಲಕ ಯುವಕರನ್ನು ಒಂದೆಡೆ ಸೇರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನಿಯ ಎಂದರು.

ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ರಾಘವೇಂದ್ರ ಶೇಟ್, ಎಂ ಪಿ ಸಿ ನೌಕರ ಪ್ರಕಾಶ ಮಡಿವಾಳ, ಸಚೀನ ಶೇಟ್ ಹೊನ್ನಾವರ, ದೈವಜ್ಞ ಗಳೆಯರ ಬಳಗದ ಪ್ರಮುಖರಾದ ಸೋಮನಾಥ ಶೇಟ್, ದಿನೇಶ ಶೇಟ್, ವೀರೇಂದ್ರ ಶೇಟ್, ರಾಘವೇಂದ್ರ ಅಣ್ಣಪ್ಪ ಶೇಟ್, ನಾಗರಾಜ ಶೇಟ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.