ಜೀವನದಲ್ಲಿ ಗುರಿ- ಗುರುವಿಗಿಂತ ಮೊದಲು ಅರಿವಿರಬೇಕು; ಜಿ.ಯು ಭಟ್ಟ

ಕುಮಟಾ: ವಿಷವೂ ಕಲಬೆರಕೆಯಾಗುವ ಸ್ಥಿತಿಗೆ ಇಂದಿನ ಸಮಾಜ ತಲುಪುತ್ತಿದೆ. ಇಂತಹ ಸಮಾಜವನ್ನು ಮೇಲೆತ್ತುವುದು ಹೇಗೆ ಎಂಬ ಚಿಂತನೆ ನಡೆಸಬೇಕಾದ ಅನಿವಾರ್ಯತೆಯಿದೆ. ಅರಿವೇ ಗುರು ಎಂಬ ಮಾತು ಸತ್ಯವಾದುದು. ಗುರಿ ಗುರು ಅವೆಲ್ಲವುದಕ್ಕಿಂತಲೂ ಮೊದಲು ಅರಿವಿರಲಿ ಎಂದು ಹಿರಿಯ ಪತ್ರಕರ್ತ, ಪತ್ರಿಕಾ ಅಕಾಡಮಿ ಪ್ರಶಸ್ತಿ ಪುರಸ್ಕೃತ ಜಿ.ಯು ಭಟ್ಟ ಅಭಿಪ್ರಾಯಪಟ್ಟರು.

ವಿವೇಕನಗರ ವಿಕಾಸ ಸಂಘದ ಸಂಯೋಜನೆಯಲ್ಲಿ “ವಿವೇಕ ಉತ್ಸವ” ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು. ಮಹಾತ್ಮ ಎನಿಸಿಕೊಳ್ಳಲು ಮನಸ್ಸು ಆತ್ಮ ಕ್ರಿಯೆಗಳೆಲ್ಲವೂ ಒಂದಾಗಬೇಕು. ಲಕ್ಷಾಂತರ ಜನ ಮತ ಹಾಕಿ ಕಳುಹಿಸಿದ ಜನಪ್ರತಿನಿಧಿಗಳು ಇಂದು ಏನು ಮಾಡುತ್ತಿದ್ದಾರೆ ಎಂಬುದೇ ಅರ್ಥ ಆಗುತ್ತಿಲ್ಲ. ನಾವೆಲ್ಲರೂ ಈ ಬಗ್ಗೆ ಚಿಂತನೆನಡೆಸಬೇಕಾದ ಅನಿವಾರ್ಯತೆಯಿದೆ. ಶಬರಿಮಲೆಗೆ ಮಹಿಳೆ ಪ್ರವೇಶದ ಕುರಿತು ನಡೆದ ಚಟುವಟಿಕೆಗಳು ಕೇವಲ ರಾಜಕೀಯವಷ್ಟೆ. ಈಗ ದೇವಾಲಯದ ಕಮೀಟಿ ಅದಕ್ಕೆ ಒಪ್ಪಿರುವುದರಿಂದ ಅಯ್ಯಪ್ಪ ರಾಜಕೀಯದಿಂದ ಮುಕ್ತನಾಗಿದ್ದಾನೆ ಎಂದು ರಾಜಕೀಯದ ಸಧ್ಯದ ಸ್ಥಿತಿಯ ಬಗ್ಗೆ ಬೇಸರಿಸಿದರು.

ಮಹಾಭಾರತ ನಡೆದ ಈ ದೇಶದಲ್ಲಿ ಶ್ರೀ ಕೃಷ್ಣ ಹೇಳಿದ ಮಾತನ್ನು ಉಲ್ಲೇಖಿಸಿದ ಅವರು ದಾಯಾದಿಗಳ ಮತ್ಸರ ಬೇಡ ಎಂಬುದಕ್ಕೆ ಮಹಾಭಾರತವನ್ನು ನಿರ್ಮಿಸಿದೆ. ದಾಯಾದಿ ಮತ್ಸರ ಬಾರದಿರಲಿ ಎಂಬುದಾಗಿ ಶ್ರೀಕೃಷ್ಣನೂ ಹೇಳಿದ್ದ ಎಂದರು. ದುರಂತಗಳನ್ನೇ ಬಿಚ್ಚಿಡುವ ರಾಮಾಯಣದ ಆದರ್ಶಗಳನ್ನು ನಾವೆಲ್ಲ ಪಾಲಿಸುತ್ತೇವೆ ಎಂಬುದನ್ನು ಪ್ರಶ್ನಿಸಿದರು.

ಮುಖ್ಯ ವಕ್ತಾರರಾಗಿ ಆಗಮಿಸಿದ ಎಸ್.ಜೆ ಖೈರನ್ ಮಾತನಾಡಿ, ಜ್ಞಾನ ಹಾಗೂ ವಿವೇಕ ಇವೆರಡನ್ನೂ ಸರಿಯಾಗಿಸಿಕೊಂಡಾಗ ಮಾತ್ರವೇ ಸಮಾಜಮುಖಿ ಚಿಂತನೆಗಳು ಸಾಧ್ಯ. ಲೋಕದಲ್ಲಿ ಸುಸಂಸ್ಕೃತರು ಯಾರು? ಸುಶಿಕ್ಷಿತರು ಯಾರು? ಎಂಬುದರ ಬಗ್ಗೆ ಗೊಂದಲ ಮೂಡುತ್ತಿದೆ. ಒಬ್ಬ ಮಾದರಿ ಶಿಕ್ಷಕ ಮಕ್ಕಳಿಗೆ ನನ್ನಂತೆ ಆಗು ಎಂಬ ಬಗ್ಗೆ ಎದೆ ತಟ್ಟಿ ಹೇಳುವ ಸಂದರ್ಭ ಬರುವಂತೆ ಬದುಕಿದರೆ ಮಾತ್ರ ಸಮಾಜ ಬದಲಾಗಲು ಸಾಧ್ಯ. ಸ್ವರ್ಗ ತಾಯಿಯ ಕಾಲಿನ ಕೆಳಗಿದೆ, ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿದ ನಂತರ ಪಾಲಕರು ಪರಿತಪಿಸುವ ಸ್ಥಿತಿ ಇದೀಗ ಹೆಚ್ಚುತ್ತಿದೆ ಎಂಬುದನ್ನು ಕಥನದ ಮೂಲಕ ವಿವರಿಸಿದರು.

ವೃತ್ತ ನಿರೀಕ್ಷಕ ಸಂತೋಷ ಶೆಟ್ಟಿ ಮಾತನಾಡಿ, ವಿವೇಕ ನಗರ ಸುಶಿಕ್ಷಿತ ಪ್ರದೇಶ, ಈ ಭಾಗದಲ್ಲಿ ಯಾವುದೇ ಪ್ರಕರಣಗಳು ಇಲ್ಲದೆ ಇರುವುದು ಈ ಪ್ರದೇಶಕ್ಕೆ ಶೋಭೆ ತರಲಿದೆ ಎಂದರು. ಸಭಾಧ್ಯಕ್ಷರು, ಸಂಘದ ಅಧ್ಯಕ್ಷರೂ ಆಗಿರುವ ಎಂ.ಆರ್ ನಾಯ್ಕ ಕಾರ್ಯಕ್ರಮದ ಯಶಸ್ಸಿನ ಹಿಂದೆ ಶ್ರಮಿಸಿದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರ ಬಗ್ಗೆ ಸಂತಸ ವ್ಯಕ್ತಪಡಿಸಿ, ಸಂಘಟನೆ ಜೊತೆಗೆ ಎಲ್ಲರೂ ಜೊತೆಯಾಗುವಂತೆ ವಿನಂತಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀಕಾಂತ ನಾಯ್ಕ, ಶಾಲಾ ಮುಖ್ಯ ಶಿಕ್ಷಕ ದೇವು ಮುಕ್ರಿ, ಪುರಸಭಾ ಸದಸ್ಯೆ ಗೀತಾ ಮುಕ್ರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಗೀತಗಾರ್ತಿ ರಮ್ಯಾ ಭಟ್ಟ ಹಾಗೂ ಭಾರತ ಕ್ರಿಕೆಟ್ ತಂಡದ ದ್ರೋಣ ಎಂದೇ ಬಿಂಬಿತವಾಗಿರುವ ರಾಘವೇಂದ್ರ ಭಂಡಾರಿ ಇವರನ್ನು ಸನ್ಮಾನಿಸಲಾಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾರದಾ ನಿಲಯದಲ್ಲಿ ವಿವೇಕ ಉತ್ಸವದ ಕುರಿತಾಗಿ ನಡೆಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂಘದ ಕಾರ್ಯಚಟುವಟಿಕೆಗಳ ಕುರಿತಾದ ಸಮಗ್ರ ವರದಿಯನ್ನು ಸಂಘದ ಸದಸ್ಯ ಜಯದೇವ ಬಳಗಂಡಿ ವಾಚಿಸಿದರು. ಶಿಲ್ಪಾ ಭಟ್ಟ ಪ್ರಾರ್ಥಿಸಿದರು. ಎಸ್.ಐ ನಾಯ್ಕ ಸ್ವಾಗತಿಸಿದರು. ಅರುಣ ಹೆಗಡೆ ನಿರೂಪಿಸಿದರು. ದತ್ತಾತ್ರೇಯ ಭಟ್ಟ ವಂದಿಸಿದರು. ಸಂಘದ ಇತರ ಸದಸ್ಯರು ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.