ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರೆಗೆ ಕಾವಿಧಾರಿಗಳಿಗೆ ನಿರ್ಬಂಧ

ಕಾರವಾರ: ಪ್ರಸಿದ್ಧ ಜಾತ್ರೆಗಳಲ್ಲೊಂದಾಗಿರುವ ಜೊಯಿಡಾ ತಾಲೂಕಿನ ಉಳವಿಯ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವವು ಫೆ. 12ರಿಂದ ಒಂಭತ್ತು ದಿನಗಳ ಕಾಲ ನಡೆಯಲಿದ್ದು, ಫೆ. 19ರ ಸಂಜೆ 4ಕ್ಕೆ ಮಹಾರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಗಂಗಾಧರ ಚೆನ್ನಪ್ಪ ಕಿತ್ತೂರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ. 19ರ ಮಹಾರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ, ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ, ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಕಿತ್ತೂರು ಶಾಸಕ ಮಾಹಾಂತೇಶ ದೊಡಗೌಡ್ರು ಹಾಜರಿರಲಿದ್ದಾರೆ. ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್, ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ, ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾವಿಧಾರಿಗಳಿಗೆ ನಿರ್ಬಂಧ: ಕಳೆದ ವರ್ಷ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮಿಗಳು ರಥೋತ್ಸವಕ್ಕೆ ಆಗಮಿಸಿದ್ದರು. ಈ ವೇಳೆ ರಥವನ್ನು ಏರುತ್ತೇನೆಂದು ಪಟ್ಟು ಹಿಡಿದು, ಸಂಭ್ರಮದ ಉತ್ಸವಕ್ಕೆ ಅಡಚಣೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಈ ಬಾರಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ. ದೇವಸ್ಥಾನದಿಂದ ಯಾವುದೇ ಕಾವಿಧಾರಿಗಳಿಗೆ ಆಮಂತ್ರಣ ನೀಡಲಾಗಿಲ್ಲ. ಆದರೂ ರಥೋತ್ಸವಕ್ಕೆ ಬರುವವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿಕೊಳ್ಳಲಾಗುವುದು. ಇನ್ನು ಮುರುಘಾ ಮಠದ ಸ್ವಾಮಿಗಳು ಕಳೆದ ಬಾರಿಯಂತೆ ಬಂದು ಅಡಚಣೆ ಉಂಟು ಮಾಡಿ, ಗಲಭೆ ನಡೆದು ಹಾನಿ ಉಂಟಾದರೆ, ಅದಕ್ಕೆ ಅವರೇ ಜವಾಬ್ದಾರರು ಎಂದು ಟ್ರಸ್ಟ್ ನವರು ಹೇಳಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.