ಸಮಾಜದಲ್ಲಿ ರಾಜಕೀಯ ಕೆಲಸಕ್ಕಿಂತ, ರಾಜಕೀಯೇತರ ಕಾರ್ಯ ನಿರ್ವಹಣೆಗೆ ಗೌರವ: ಶಾಸಕ ಕಾಗೇರಿ

ಸಿದ್ದಾಪುರ: ಸಮಾಜದಲ್ಲಿ ರಾಜಕೀಯವಾಗಿ ಕೆಲಸ ಮಾಡುವುದಕ್ಕಿಂತ, ರಾಜಕೀಯೇತರ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಹೆಚ್ಚಿನ ಗೌರವ ಇದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವುದುಕ್ಕೆ ಅವಕಾಶಗಳಿವೆ. ಸರ್ಕಾರದ ಯೋಜನೆಗಳನ್ನು ಉತ್ತಮವಾಗಿ ಅನುಷ್ಠಾನ ಮಾಡಿರುವುದನ್ನು ಹತ್ತಿರದಿಂದ ಗಮನಿಸಿದ್ದೇನೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಆಧಾರ ಸಂಸ್ಥೆಯ ಸಂಕಲ್ಪ ದಿನಾಚರಣೆ ಹಾಗೂ ದಿ.ಎಂ.ಟಿ.ಕೊಡಿಯ ನೆನಪಿನ ‘ಆಧಾರಶ್ರೀ’ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇಂದು ಆಧಾರ ಸಂಸ್ಥೆ ಅತ್ಯುತ್ತಮವಾದ ಕೆಲಸ ಕಾರ್ಯವನ್ನು ಮಾಡುತ್ತಿದೆ. ಅನೇಕರ ಸ್ವಾವಲಂಬಿ ಜೀವನವನ್ನು ನಡೆಸುವುದಕ್ಕೆ ಬೇಕಾದ ಅಗತ್ಯ ತರಬೇತಿಯನ್ನು ನೀಡಿದೆ.

ದಿ.ಕೊಡಿಯ ಅವರು ಸಮಾಜದಲ್ಲಿ ತಮ್ಮ ವೃತ್ತಿಯ ಜೊತೆಯಲ್ಲಿ ಅನೇಕ ಜನಪರ ಕಾರ್ಯವನ್ನು ಮಾಡಿದ್ದಾರೆ. ಅವರ ಪ್ರೇರಣೆಯಿಂದ ಇಂದು ಆಧಾರ ಸಂಸ್ಥೆ ಹುಟ್ಟಿಕೊಂಡು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವಂತಾಗಿದೆ. ಅವರ ನೆನಪಿನಲ್ಲಿ ಆಧಾರಶ್ರೀ ಪ್ರಶಸ್ತಿಯನ್ನು ಅವರಷ್ಟೇ ಸಮನಾಗಿ ಕೆಲಸ ಮಾಡುತ್ತಿರುವ ಸಿ.ಎಸ್.ಗೌಡರ ಹೆಗ್ಗೋಡಮನೆ ಇವರಿಗೆ ನೀಡುತ್ತಿರುವುದು ಸಂತೋಷವಾಗಿದೆ. ಅವರ ಹೆಸರನ್ನು ಶಾಶ್ವತವಾಗಿ ನೆನಪಿಸುವ ಕಾರ್ಯದ ಆರಂಭವಾಗಿದೆ. ಇದು ಮುಂದುವರಿಯಲಿ ಎಂದರು.

ಮುಖ್ಯ ಅತಿಥಿಗಳಾಗಿ ಕಾರವಾರದ ಖ್ಯಾತ ನ್ಯಾಯವಾದಿ ಜಿ.ಟಿ.ನಾಯ್ಕ ಮಣಕಿನಗುಳಿ ಮಾತನಾಡಿ ಸ್ವಾವಲಂಬಿ ಜೀವನ ಇಂದು ಬಹುಮಹತ್ವದಾಗಿದೆ. ಆ ಕ್ಷೇತ್ರದಲ್ಲಿ ವೃತ್ತಿ ಕೌಶಲ್ಯ ತರಬೇತಿಯನ್ನು ಆಧಾರ ಸಂಸ್ಥೆ ನೀಡಿ ಮುನ್ನಡೆಸುತ್ತಿದೆ. ಎಂ.ಟಿ.ಕೊಡಿಯ ಅವರ ನೆನಪಿನ ಪ್ರಶಸ್ತಿಗೆ ಸಿ.ಎಸ್.ಗೌಡರ್ ಆಯ್ಕೆ ಸೂಕ್ತವಾಗಿದೆ. ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದವರ ನೆನಪಿಸುವ, ಗೌರವಿಸುವ ಕಾರ್ಯ ಸಮಾಜದಿಂದ ಆಗಬೇಕಿತ್ತು. ಅದು ಈ ಸಂಸ್ಥೆಯಿಂದ ಆಗುತ್ತಿದೆ ಎಂದರು.

ಎ.ಪಿ.ಎಂ.ಸಿ ಅಧ್ಯಕ್ಷ ಕೆ.ಜಿ.ನಾಗರಾಜ ಮಾತನಾಡಿ ಸಮಾಜದ ನೊಂದವರ ಧ್ವನಿಯಾಗಿ ಎಂ.ಟಿ.ಕೊಡಿಯ ಅವರು ಇದ್ದರು. ಅವರ ಹಾದಿಯಲ್ಲಿ ಸಿ.ಎಸ್.ಗೌಡರ ಸಾಗುತ್ತಿದ್ದಾರೆ. ಆಧಾರ ಸಂಸ್ಥೆ ಯೋಗ್ಯವಾದ ಆಯ್ಕೆಯನ್ನು ಮಾಡಿ ಅಭಿನಂದನಾರ್ಹ ಕಾರ್ಯ ಮಾಡಿದೆ ಎಂದರು.

ಆಧಾರ ಶ್ರೀ ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಮಾತನಾಡಿ ನಾವು ಸಮಾಜದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳಿಗೆ ಸಂಘಟಿತರಾಗಬೇಕಾಗಿದೆ. ನಮಗೆ ಎಂ.ಟಿ.ಕೊಡಿಯ ಅವರು ಗುರುಗಳಂತೆ. ಅವರೇ ಹುಟ್ಟುಹಾಕಿದ ನಿವೃತ್ತ ನೌಕರರ ಸಂಘವನ್ನು ಇಂದು ಮುನ್ನಡೆಸುತ್ತಿದ್ದೇವೆ. ಸಮಾಜಕ್ಕಾಗಿ ನಾವು ಕೆಲಸ ಮಾಡಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕು ಎಂದರು.

ಅಧ್ಯಕ್ಷತೆ ವಹಿಸಿದ ತಾ.ಪಂ ಅಧ್ಯಕ್ಷ ಸುಧೀರ್ ಬಿ.ಗೌಡರ್ ಮಾತನಾಡಿದರು. ವೇದಿಕೆಯಲ್ಲಿ ಆಧಾರ ಸಂಸ್ಥೆ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ, ಖಜಾಂಚಿ ಜಗದೀಶ ಎಂ.ನಾಯ್ಕ, ಸಂಸ್ಥಾಪಕ ಉಪಾಧ್ಯಕ್ಷ ನಾಗರಾಜ ಎಂ.ಕೊಡಿಯ ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ತಹಶೀಲ್ದಾರ ಪುಟ್ಟರಾಜ ಗೌಡ, ಟಿ.ಎಂ.ಎಸ್.ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಪ್ರಶಾಂತಿ ವಿದ್ಯಾಕೇಂದ್ರದ ಆರ್.ಜಿ.ಪೈ ಮಂಜೈನ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎ.ಜಿ.ನಾಯ್ಕ, ಜಿ.ಜಿ.ಹೆಗಡೆ ಬಾಳಗೋಡ, ಶಂಕರಮೂರ್ತಿ ನಾಯ್ಕ, ಮುಂತಾದವರು ಉಪಸ್ಥಿತರಿದ್ದು ಸಿ.ಎಸ್.ಗೌಡರ ಅವರನ್ನು ಅಭಿನಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.