ಜಿಲ್ಲಾ ಉಸ್ತುವಾರಿ ಸಚಿವರಿಂದ ನೀರಾವರಿ ಕಾಮಗಾರಿಗಳ ವೀಕ್ಷಣೆ

ಕಾರವಾರ:ಕಾಳಿ ನದಿಯಿಂದ ಹಳಿಯಾಳದ ವಿವಿಧ ಕೆರೆ ಬಾಂದಾರುಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಅವರು ರವಿವಾರ ಪರಿಶೀಲನೆ ನಡೆಸಿದರು.

ಕಾಳಿ ನದಿಯಿಂದ ಪೈಪ್ ಲೈನ್ ಮೂಲಕ ಕೆರೆಗಳಿಗೆ ನೀರು ಹರಿಸುವ ಬಹುದೊಡ್ಡ ಯೋಜನೆ ಇದಾಗಿದ್ದು ಹಳಿಯಾಳ ತಾಲೂಕಿನ ಬಹುತೇಕ ಹಳ್ಳಿಗಳ ಕೆರೆ ಬಾಂದಾರುಗಳ ತುಂಬುವುದರಿಂದ ಆ ಭಾಗದ ರೈತರಿಗೆ ಅತ್ಯಂತ ಉಪಯುಕ್ತ ಯೋಜನೆ ಇದಾಗಿದೆ ಎಂದು ಸಚಿವರು ಹೇಳಿದರು. ಈ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಈ ಮಹತ್ವದ ಯೋಜನೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಎಂಜಿನಿಯರ್ ಸತೀಶ್ ನಾಯ್ಕ ಅವರಿಗೆ ಸೂಚಿಸಿದರು.

ಪೈಪುಗಳ ನಿರ್ಮಾಣ ಕೂಡ ಇಲ್ಲಿಯೇ ಆಗುವುದರಿಂದ ಪೈಪ್ ಲೈನ್ ಮಾಡುವುದು ವಿಳಂಬವಾಗುವುದಿಲ್ಲ. ಮುಂದಿನ 15ತಿಂಗಳೊಳಗಾಗಿ ಕಾಮಗಾರಿಗಳು ಪೂರ್ಣಗೊಂಡು ಕೆರೆಗಳಿಗೆ ನೀರುಣಿಸುವ ಕಾರ್ಯ ಆಗಬೇಕು ಎಂದು ಸಚಿವರು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್ ಘೋಟ್ನೇಕರ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ್ ರೇಣಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿತೀಶ್ ಕುಮಾರ್, ತಹಸೀಲ್ದಾರ್ ವಿದ್ಯಾದರ್ ಗುಳಗುಳೆ, ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮೆಟಗುಡ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಹೇಶ್ ಕುರಿಯವರ್ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.