ಬಲಿಭಿರ್ಮುಖಮಾಕ್ರಾಂತಂ ಪಲಿತೈರಂಕಿತಂ ಶಿರಃ
ಗಾತ್ರಾಣಿ ಶಿಥಿಲಾಯಂತೇ ತೃಷ್ಣೈಕಾ ತರುಣಾಯತೇ ||
ಆಸೆ ಅನ್ನುವುದು ಮಾನವ ಬಾಳ್ವೆಯ ಬೆಳಕೂ ಹೌದು, ಮಿತಿ ತಪ್ಪಿದರೆ ಅದುವೇ ಬಂಧನವೂ ಹೌದು. ಆಸೆಯಿಲ್ಲದೆ ಮಾನವನು ಕಾರ್ಯಗಳಲ್ಲಿ ಪ್ರವೃತ್ತನಾಗಲಾರ. ಹಾಗಂತ ಆಸೆಯೇ ಅತಿಯಾದರೆ ನೆಮ್ಮದಿಯು ಕನಸಷ್ಟೆ.
ವಯಸ್ಸಾದಮೇಲೆ ಕಾಲದ ಬದಲಿಂದಾಗಿ ಬಾಯಲ್ಲಿನ ಹಲ್ಲುಗಳು ಉದುರಿಹೋಗಿವೆ, ಅಲ್ಲಲ್ಲಿ ಮೂಡಿದ ಬೆಳ್ಗೂದಲಿನಿಂದ ಶಿರಸ್ಸಿನಲ್ಲೂ ವಾರ್ಧಕ್ಯದ ಅಂಕಿತ ಕಂಡುಬರುತ್ತಿದೆ, ದೇಹದ ಅಂಗಾಂಗಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಶಿಥಿಲವಾಗುತ್ತಿವೆ, ಹಾಗಿದ್ದೂ ನಿತ್ಯತಾರುಣ್ಯದಿಂದ ಹೊಸ ಹೊಸ ವರಸೆಯೊಂದಿಗೆ ಆಸೆಯೆಂಬುದು ಮಾತ್ರ ಹೊಮ್ಮುತ್ತಲೇ ಇದೆ. ದೇಹದ ಸಹಕಾರವಿಲ್ಲದ ಬರಿಯ ಆಸೆಗಳುಂಟಲ್ಲ, ಅದು ಅತ್ಯಂತ ಯಾತನಾಮಯವಾದುದು. ಮನುಷ್ಯನು ತನ್ನ ದೇಹವು ಜೀರ್ಣವಾಗುವ ಕಾಲಕ್ಕೆ ಮನಸಾ ಪಕ್ವನಾಗಲೇಬೇಕು.
– ಶ್ರೀ ನವೀನ ಗಂಗೋತ್ರಿ