ಸುವಿಚಾರ

ದಗ್ಧಂ ಖಾಂಡವಮರ್ಜುನೇನ ಬಲಿನಾ ದಿವ್ಯೈರ್ದ್ರುಮೈಸ್ಸೇವಿತಂ 

ದಗ್ಥಾ ವಾಯುಸುತೇನ ರಾವಣಪುರೀ ಲಂಕಾ ಪುನಃ ಸ್ವರ್ಣಭೂಃ |
ದಗ್ಧಃ ಪಂಚಶರಃ ಪಿನಾಕಪತಿನಾ ತೇನಾಪ್ಯಯುಕ್ತಂ ಕೃತಂ
ದಾರಿದ್ರ್ಯಂ ಜನತಾಪಕಾರಕಮಿದಂ ಕೇನಾಪಿ ದಗ್ಧಂ ನಹಿ ||

ದಿವ್ಯವಾದ ಮರಗಳಿಂದಲೂ ವನಸ್ಪತಿಗಳಿಂದಲೂ ಕೂಡಿದ್ದ ಖಾಂಡವ ವನವು ಮಹಾಭಾರತ ಕಾಲದಲ್ಲಿ ಅರ್ಜುನನಿಂದ ಸುಡಲ್ಪಟ್ಟಿತು. ಬಂಗಾರದ ನಗರಿಯಾಗಿದ್ದ ಲಂಕೆಯು ವಾಯುಸುತನಾದ ಹನೂಮಂತನಿಂದ ರಾಮಾಯಣದ ಕಾಲದಲ್ಲಿ ಸುಡಲ್ಪಟ್ಟಿತು. ಪಂಚಬಾಣನಾದ ಮನ್ಮಥನು ಒಂದೊಮ್ಮೆ ಶಿವನ ಉರಿಗಣ್ಣಿಗೆ ಸಿಲುಕಿ ಹುತನಾಗಿದ್ದ. ಹೀಗೆ ಆಯಾಯ ಕಾಲದಲ್ಲಿ ಬಹುಮೂಲ್ಯವಾದ ಸಂಗತಿಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ದೇವತೆಗಳು ದೇವಾಂಶಸಂಭೂತರು ಸುಟ್ಟು ಮುಗಿಸಿದರು. ಆದರೆ ಈ ದಾರಿದ್ರ್ಯ ಅಥವಾ ಬಡತನ ಅನ್ನುವ ಪರಮ ಅಪಕಾರಿಯನ್ನು ಇವತ್ತಿನವರೆಗೂ ಯಾರೂ ಯಾಕೆ ಸುಟ್ಟುಹಾಕಲಿಲ್ಲವೋ ತಿಳಿಯದು. ಮೌಲ್ಯಯುತವಾದ ಸಂಗತಿಗಳನ್ನೇ ಸುಟ್ಟವರಿರುವರಾದರೂ ಈ ಜನಶೋಷಕವಾದ ದಾರಿದ್ರ್ಯವನ್ನು ಮಾತ್ರ ಯಾರೂ ನಾಶಮಾಡದೇ ಉಳಿಸಿದ್ದಾರೆ.

ಗರೀಬಿ ಹಠಾವೋ ಅನ್ನುವ ಅರವತ್ತೆಪ್ಪತ್ತು ವರ್ಷದಿಂದ ಹೇಳಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳೂ ಸಹ ಬಡತನವನ್ನು ಸುಡದೇ ಉಳಿಸಿಕೊಂಡಿವೆಯಷ್ಟೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.