ವೇದ ಮಂತ್ರ ಆವಿಷ್ಕಾರಕ್ಕೆ ಕಾಲದ ಬಂಧವಿಲ್ಲ; ಸ್ವಾಮಿ ಯೋಗಾತ್ಮಾನಂದ


ಗೋಕರ್ಣ: ವೇದ ಮಂತ್ರ ಆವಿಷ್ಕಾರಕ್ಕೆ ಕಾಲದ ಬಂಧವಿಲ್ಲ. ಕ್ರಾಂತ ದರ್ಶನ ಇರುವವರಲ್ಲಿ ವೇದ ತಾನೇ ತಾನಾಗಿ ಆವಿರ್ಭಾವವಾಗುತ್ತದೆ ಎನ್ನುವುದನ್ನು ಇಂದಿನ ಆಧುನಿಕ ಯುಗದಲ್ಲಿ ಜಗತ್ತಿಗೆ ತೋರಿದವರು ಮಹರ್ಷಿ ದೈವರಾತರಾಗಿದ್ದಾರೆ ಎಂದು ಸ್ವಾಮಿ ಯೋಗಾತ್ಮಾನಂದ ಹೇಳಿದರು.

ಅಶೋಕೆಯಲ್ಲಿ ದೈವರಾತ ಜಯಂತಿ ನಿಮಿತ್ತ ನೂತನ ಪಶುಪತಿ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಿ ನಂತರ ನಡೆದ ಸಭೆಯಲ್ಲಿ ಅವರು ಆಶೀರ್ವಾದ ನೀಡುತ್ತಿದ್ದರು.
ಆದಿ ಶಂಕರರು ತಿಳಿಸಿದ ಕ್ರಾಂತ ದರ್ಶನವನ್ನು ದೈವರಾತರಲ್ಲಿ ಕಾಣಬಹುದಾಗಿದೆ.ಮಂತ್ರದ ಆವಿರ್ಭಾವ ಎನ್ನುವುದು ಕವಿತೆ ಬರೆದಂತಲ್ಲ.ನಮ್ಮೊಳಗಿನ ದೇವಾತ್ಮ ದರ್ಶನವನ್ನು ಕ್ರಾಂತ ದರ್ಶನ ಎಂದು ಆಚಾರ್ಯರು ಕರೆದರು. ಈಕಾಲಕ್ಕೆ ಅತಿ ಅಪರೂಪದ ಅತಿ ವಿಶಿಷ್ಟವಾದ ಈ ದರ್ಶನದ ಮೂಲಕ ದೈವರಾತರು ಹಾಲೆಂಡ್,ಜರ್ಮನಿ,ನೇಪಾಳ,ಇಂಗ್ಲೆಂಡ್ ಸೇರಿ ಸಮಸ್ತ ವಿಶ್ವಕ್ಕೆ ವೇದವನ್ನು ಬಹು ಸರಳ ರೀತಿಯಲ್ಲಿ ಕಲಿಸಿ ವಿಶ್ವಗುರು ಎನ್ನಿಸಿದರು ಎಂದು ಸ್ವಾಮೀಜಿ ಹೇಳಿದರು. ದೈವರಾತರ ಮೊಮ್ಮಗ ವೇದಶ್ರವ ಶರ್ಮ ಮಾತನಾಡಿ ಅಶೋಕೆಯಲ್ಲಿ ಮುಂದೆ ಯೋಜಿಸಲಾದ ವಿವಿಧ ನಿಸರ್ಗ ಪರ ಯೋಜನೆಗಳನ್ನು ವಿವರಿಸಿ ಸರ್ವರ ಸಹಕಾರ ಕೋರಿದರು.

ಸಭೆಯಲ್ಲಿ ಪರಿಸರವಾದಿ ಶಿವಾನಂದ ಕಳವೆ, ದೇವಶ್ರವ ದೈವರಾತ ಶರ್ಮ, ಡಾ.ಜಿ.ಜಿ.ಹೆಗಡೆ ಕುಮಟಾ, ಡಾ.ನಿರಂಜನ ಹೊಸಬಾಳೆ, ಡಾ.ಅರ್ಚನಾ ಸಿ.ಬೆಂಗಳೂರು, ಮೈಸೂರು ಆಯುರ್ವೇದ ಕಾಲೇಜ್ ನಿವೃತ್ತ ಪ್ರಾಚಾರ್ಯ ಡಾ.ಸತ್ಯನಾರಾಯಣ ಭಟ್ಟ, ಡಾ.ಮಹೇಶ ಪಂಡಿತ ಹೊನ್ನಾವರ, ಡಾ.ಕವಿತಾ ಬೆಂಗಳೂರು ಮಾತನಾಡಿದರು. ಇದೇ ವೇಳೆ ಮಹರ್ಷಿ ದೈವರಾತ ಸಭಾ ಭವನವನ್ನು ಡಾ.ಜಿ.ಜಿ.ಹೆಗಡೆ, ಕಾಯಕಲ್ಪ ಕುಟೀರವನ್ನು ಡಾ.ಸತ್ಯನಾರಾಯಣ ಭಟ್ಟ ಉದ್ಘಾಟಿಸಿದರು. ಇವುಗಳ ಜೊತೆಗೆ ಧನ್ವಂತರಿ ಮೂರ್ತಿಯ ಪ್ರತಿಷ್ಠಾ ಕಾರ್ಯಕ್ರಮ ಕೂಡ ನಡೆಯಿತು. ಸಭೆಯನ್ನು ಡಾ.ಪತಂಜಲಿ ಶರ್ಮ,ಡಾ.ಸೌಮ್ಯಶ್ರೀ ಶರ್ಮ ಮತ್ತು ವೀಣಾ ಅಶೋಕ ಜೋಶಿ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.