ಮೌಲ್ಯಾಧಾರಿತ ರಾಜಕಾರಣವನ್ನ ಜನರ ಮನಸ್ಸಿನಲ್ಲಿ ಬಿತ್ತಿದವರೇ ಹೆಗಡೆಯವರು; ಶಾಸಕ ಎಚ್.ಕೆ.ಪಾಟೀಲ


ಶಿರಸಿ: ರಾಜಕಾರಣ ಇರುವವರೆಗೆ ದಿ. ರಾಮಕೃಷ್ಣ ಹೆಗಡೆ ಯವರು ಸಾಯಲು ಸಾಧ್ಯವಿಲ್ಲ. ಮೌಲ್ಯಾಧಾರಿತ ರಾಜಕಾರಣ, ಅದರ ಕಲ್ಪನೆ, ಶಬ್ದ, ವಾಕ್ಯ ಜನರ ಮನಸ್ಸಿನಲ್ಲಿ ಬಿತ್ತಿದವರು ಹೆಗಡೆಯವರು ಎಂದು ಮಾಜಿ ‌ಸಚಿವ ಹಾಗೂ ಗದಗ ಕ್ಷೇತ್ರದ ಶಾಸಕ‌ ಎಚ್.ಕೆ.ಪಾಟೀಲ ಹೇಳಿದರು.

ಇಲ್ಲಿನ‌ ಯಲ್ಲಾಪುರ ರಸ್ತೆಯಲ್ಲಿರುವ ಗಾಣಿಗ ಸಭಾಭವನದಲ್ಲಿ ರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ, ಅಪ್ರತಿಮ ಮುತ್ಸದ್ಧಿ ರಾಮಕೃಷ್ಣ ಹೆಗಡೆ ಸಂಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತತ್ವ, ಸಿದ್ಧಾಂತದ, ಅಧಿಕಾರ ತ್ಯಾಗ ಮಾಡುವ ಮೌಲ್ಯಾಧಾರಿತ ರಾಜಕಾರಣ ಹೆಗಡೆ ಅವರದ್ದಾಗಿದ್ದು, ರಾಜಕಾರಣ ಕಲುಶಿತಗೊಂಡಾಗ ಅವರ ನೆನಪಾಗುತ್ತದೆ ಎಂದರು.

ಇಂದು ಯಾರು ಒಳ್ಳೆಯವರು, ಯಾರು ಪ್ರಾಮಾಣಿಕರು, ಯಾದು ಅಪ್ರಮಾಣಿಕರು ಎನ್ನುವುದು ಹೇಳಲಾರದಷ್ಟು ರಾಜಕಾರಣ ಕ್ಲಿಷ್ಟವಾಗಿದೆ. ಏನು ಮಾತನಾಡುತ್ತಾರೋ ಅದನ್ನು ಉಳಿಸಿಕೊಳ್ಳುವುದಿಲ್ಲ. ಆಚರಣೆಗೆ ತದ್ವಿರುದ್ದವಾಗಿ ಮಾತನಾಡುತ್ತಾರೆ. ಆದರೆ ರಾಮಕೃಷ್ಣ ಹೆಗಡೆ ಯವರು ದೇಶದ ಹಿತದೃಷ್ಟಿಯ, ಅವಶ್ಯಕತೆಯ ರಾಜಕಾರಣ ಮಾಡಿದ್ದರು. ಎಂದಿಗೂ ದ್ವೇಷ ಸ್ವಾರ್ಥ ಇಟ್ಟುಕೊಂಡು ರಾಜಕಾರಣ ಮಾಡಲಿಲ್ಲ. ಅಂತಹ ರಾಷ್ಟ್ರ ನಾಯಕರಾಗಿದ್ದರು. ಇಂದಿಗೂ ಕರ್ನಾಟಕದ ಬಹುದೊಡ್ಡ ನಾಯಕ ದೇಶಮಟ್ಟದಲ್ಲಿ ಹೆಸರು ಬಂದಾಗ ಕಾಣುವುದು ರಾಮಕೃಷ್ಣ ಹೆಗಡೆ ಯವರು ಎಂದರು.

ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಇಂದು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಜಾತೀಯತೆ ಹೆಚ್ಚಿದೆ. ಆದರೆ ಹೆಗಡೆ ಅವರು ಎಂದಿಗೂ ಜಾತಿ ರಾಜಕೀಯ ಮಾಡಿದವರಲ್ಲ. ಎರಡನೇ ಹಂತದ ನಾಯಕರನ್ನು ಅವರು ಬೆಳೆಸಿದ್ದರು. ಇಂದು ಅಧಿಕಾರ ಕೇಂದ್ರೀಕೃತವಾಗುತ್ತಿದ್ದರೆ ಹೆಗಡೆ ಕಾಲಾವಧಿಯಲ್ಲಿ ಅಧಿಕಾರ ವಿಕೇಂದ್ರೀಕರಣದ ಮೂಲಕ ಜನರಿಗೆ ಅಧಿಕಾರ ಹಂಚಿದ್ದರು. ಇಂಥ ನಾಯಕರನ್ನು ಕೇವಲ ಹವ್ಯಕರ ನಾಯಕರನ್ನಾಗಿ ಇಂದು ಬಿಂಬಿಸುತ್ತಿರುವುದು ಖೇದಕರ ಎಂದು ಹೇಳಿದ ಅವರು, ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿ ಸಮಾಜದ ವಿವಿಧ ಚಟುವಟಿಕೆಗಳನ್ನು ಮಾಡುವ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ‌

ಸಮ್ಮಾನ: ಹಿರಿಯ ಸಹಕಾರಿ ಪಿ.ಎಮ್.ತಾಂಡೇಲ ಕಾರವಾರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ, ಸಮುದಾಯದ ಸೇವೆ ರಾಮಕೃಷ್ಣ ಹೆಗಡೆ ಕೊಟ್ಟ ಅವಕಾಶ. ಹಿಂದುಳಿದವರು ಶೈಕ್ಷಣಿಕವಾಗಿ ಮುಂದೆ ಬರಲು ಕೆಲಸ ಮಾಡುವಂತೆ ಹೇಳಿದ್ದರು ಎಂದು ನೆನೆಪಿಸಿಕೊಂಡರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ರಮಾನಂದ ನಾಯಕ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಯಕ ಪ್ರಮೋದ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಪತ್ರಕರ್ತ ಭಾಸ್ಕರರಾವ್, ಅಭಿಮಾನ ವೇದಿಕೆ ಕೋಶಾಧ್ಯಕ್ಷ ಎನ್.ಪಿ.ಗಾಂವಕರ ಇದ್ದರು. ಸಭಾ ಕಾರ್ಯಕ್ರಮದ ಮೊದಲು ಯಲ್ಲಾಪುರ ನಾಕಾದಲ್ಲಿರುವ ರಾಮಕೃಷ್ಣ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಎಲ್ಲಾ ಗಣ್ಯರು ಗೌರವ ಸಲ್ಲಿಸಿದರು.

ಚೇತನಾ ಹೆಗಡೆ ಪ್ರಾರ್ಥಿಸಿದರು. ಅಭಿಮಾನ ವೇದಿಕೆಯ ಕಾರ್ಯಾಧ್ಯಕ್ಷ ವೆಂಕಟೇಶ ಹೆಗಡೆ ಹೊಸಬಾಳೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಣೆ ಮಾಡಿದರೆ, ಆರ್.ಎಮ್.ಹೆಗಡೆ ಹಲಸರಿಗೆ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.