ಜ.13ಕ್ಕೆ ಡಾ.ಬಸವರಾಜ ರಾಜಗುರು ಸ್ಮೃತಿ ರಾಷ್ಟ್ರೀಯ ಸಂಗೀತೋತ್ಸವ


ಶಿರಸಿ: ಶ್ರೀ ಕೃಷ್ಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್, ಡಾ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ ಪದ್ಮಭೂಷಣ ಡಾ.ಬಸವರಾಜ ರಾಜಗುರು ಸ್ಮೃತಿ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮ ಇಲ್ಲಿನ ಸಾಮ್ರಾಟ್ ಅತಿಥಿ ಗೃಹದ ಸಭಾಭವನದಲ್ಲಿ ಜ.13 ರಂದು ಮಧ್ಯಾಹ್ನ3 ರಿಂದ ನಡೆಯಲಿದೆ.

ಇಲ್ಲಿನ ಸಾಮ್ರಾಟ್ ಹೊಟೇಲ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂಗೀತ ಗುರು ಡಾ.ಕೃಷ್ಣಮೂರ್ತಿ ಭಟ್, ಸಂಗೀತ ಕಾರ್ಯಕ್ರಮ ನಡುವೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ್ ವಹಿಸಲಿದ್ದು, ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶಿಗೇಹಳ್ಳಿ ಉದ್ಘಾಟಿಸುವರು. ಖ್ಯಾತ ಗಾಯಕ ಪಂ.ಮುದ್ದುಮೋಹನ ಅವರಿಗೆ ಗೌರವ ಸಮ್ಮಾನ ನೇರವೇರಲಿದ್ದು, ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತ ರಾಜು ಮೊಗವೀರ, ಮಾರಿಕಾಂಬಾ ದೇವಾಲಯ ಟ್ರಸ್ಟಿ ಶಾಂತಾರಾಮ ಬಂಡೀಮನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ನಿರ್ದೇಶಕ ಹಿಮಂತರಾಜು ಆಗಮಿಸಲಿದ್ದು, ಡಾ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಟ್ರಸ್ಟಿಗಳಾದ ಭಾರತಿದೇವಿ ರಾಜಗುರು, ನಿಜಗುಣ ರಾಜಗುರು ಆಗಮಿಸಲಿದ್ದಾರೆ ಎಂದರು.

ಮಧ್ಯಾಹ್ನ 3 ಗಂಟೆಯಿಂದ ಪರಂಪರಾ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪಂ.ಮುದ್ದುಮೋಹನ, ಡಾ.ಕೃಷ್ಣಮೂರ್ತಿ ಭಟ್, ಸುಮಾ ಹೆಗಡೆ, ಸಚಿನ್ ಭಾಗ್ವತ್, ನಮನಾ ಮತ್ತು ಗಗನಾ ಹಾಗೂ ಸಹಹಲಾವಿದರಾಗಿ ಪ್ರಕಾಶ ಹೆಗಡೆ, ಅನಂತ ಹೆಗಡೆ, ಗುರುರಾಜ ಹೆಗಡೆ, ಅಮಿರುದ್ಧ ಹೆಗಡೆ, ಅಜಯ ಹೆಗಡೆ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂವಾದ: ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಮುದ್ದು ಮೋಹನರ ಜೊತೆಯಲ್ಲಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಅಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು , ವಿದ್ಯಾರ್ಥಿಗಳ ಸಂಗೀತಾಭ್ಯಾಸಕ್ಕೆ ಅನುಕೂಲ ಆಗಲಿದೆ ಎಂದರು. ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ‌ಹೆಗಡೆ ಶಿಗೇಹಳ್ಳಿ ಇದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.