ಆಧುನಿಕ ಕಾಲದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಅವಶ್ಯ; ಭವ್ಯಾ ಶೆಟ್ಟಿ

ಯಲ್ಲಾಪುರ: ಮುಂದುವರೆಯುತ್ತಿರುವ ಕಾಲದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಅವಶ್ಯ. ಮಹಿಳೆಯರು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಜ್ಞಾನದ ಮಟ್ಟವನ್ನು ವೃದ್ಧಿಸಿಕೊಳ್ಳಬೇಕು ಎಂದು ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ ಹೇಳಿದರು.

ಅವರು ಪಟ್ಟಣದ ರವೀಂದ್ರನಗರದಲ್ಲಿ ಮನುವಿಕಾಸ ಸಂಸ್ಥೆ ಕರ್ಜಗಿ, ಎಡಲ್‍ಗೀವ್ ಫೌಂಡೇಶನ್ ಸಂಯುಕ್ತವಾಗಿ ಹಮ್ಮಿಕೊಂಡ ಮಹಿಳೆಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಡ ವರ್ಗದ ಜನರಿಗೆ ಹಣ ನೀಡಿ ಕಂಪ್ಯೂಟರ್ ತರಗತಿಗಳಿಗೆ ಸೇರಿಕೊಳ್ಳುವುದು ಕಷ್ಟದಾಯಕವಾಗಿದ್ದು, ಆ ನಿಟ್ಟಿನಲ್ಲಿ ಮಹಿಳೆಯರಿಗೆ ಉಚಿತ ಗಣಕಯಂತ್ರದ ತರಬೇತಿ ನೀಡುತ್ತಿರುವ ಮನುವಿಕಾಸ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದ ಅವರು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಂಪ್ಯೂಟರ್ ಶಿಕ್ಷಣವನ್ನು ಮಾನ್ಯತೆ ಮಾಡಲಾಗುತ್ತಿದೆ. ಈ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸಮಾಜದಲ್ಲಿ ಸಾಧನೆ ಮಾಡಬೇಕು ಎಂದರು.

ಮನುವಿಕಾಸ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹರಿಶ್ಚಂದ್ರ ಭಟ್ಟ ಮಾತನಾಡಿ, ಮನು ವಿಕಾಸ ಸಂಸ್ಥೆ ಗ್ರಾಮೀಣ ಹಾಗೂ ನಗರ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಕಾರ್ಯನಿರ್ವಹಿಸುತ್ತಿದ್ದು, 2003 ರಲ್ಲಿ ಈ ಸಂಸ್ಥೆ ಪ್ರಾರಂಭವಾಗಿ ಉತ್ತರಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಈಗ ಹಾವೇರಿ ಜಿಲ್ಲೆಗೆ ಸಂಸ್ಥೆಯ ಕಾರ್ಯವನ್ನು ವಿಸ್ತರಿಸಲಾಗಿದೆ ಎಂದ ಅವರು, ಕಂಪ್ಯೂಟರ್ ತರಬೇತಿಯನ್ನು ಪಡೆದುಕೊಂಡ ಮಹಿಳೆಯರು ಸ್ವಂತ ಉದೋಗ ನಿರ್ವಹಿಸಲು ಪ್ರಯತ್ನ ನಡೆಸಬೇಕು ಎಂದರು.

ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿ, ಕಂಪ್ಯೂಟರ್ ಶಿಕ್ಷಣ ಪಡೆದರೆ ಯಾವುದೇ ಉದ್ಯೋಗ ಗಳಿಸಿಕೊಳ್ಳಲು ಸಾಧ್ಯ. ಈ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ನಾಗರಾಜ ಮದ್ಗುಣಿ, ಪ.ಪಂ ಸದಸ್ಯೆ ಶ್ಯಾಮಿಲಿ ಪಾಟಣಕರ, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಶಶಿಧರ್, ಮನುವಿಕಾಸ ಸಂಸ್ಥೆಯ ಜಿಲ್ಲಾ ಸಂಯೋಜಕ ಬಸವರಾಜ ಉಗ್ಗಿನಕೇರಿ ಮಾತನಾಡಿದರು. ಮನುವಿಕಾಸ ಸಂಸ್ಥೆಯ ಶುಭಾ ಪೈ ಉಪಸ್ಥಿತರಿದ್ದರು. ಸ್ಮಿತಾ ಪ್ರಾರ್ಥಿಸಿದರು. ಮನುವಿಕಾಸ ಸಂಸ್ಥೆಯ ತಾಲೂಕಾ ಅಧಿಕಾರಿ ರೇಣುಕಾ ಉಗ್ಗಿನಕೇರಿ ನಿರ್ವಹಿಸಿ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.