ರಾಜ್ಯದ ಬರ ಪರಿಸ್ಥಿತಿ ಎದುರಿಸಲು ಕೇಂದ್ರದಿಂದ ಹಣ ಬಿಡುಗಡೆಗೆ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಸಚಿವ ಆರ‍್ವಿಡಿ 

ಕಾರವಾರ: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರಕಾರವು ಕೂಡಲೇ ಮುಂಗಾರು ಹಂಗಾಮಿಗೆ ಅನ್ವಯವಾಗುವ ಎನ್.ಡಿ.ಆರ್.ಎಫ್. ಹಣವನ್ನು ಮತ್ತು ಎಸ್.ಡಿ.ಆರ್.ಎಫ್.ನ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಬೇಕೆಂದು ಕೋರಿ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಪತ್ರ ಬರೆದಿರುವ ಅವರು, ಈ ವರ್ಷದ ಮುಂಗಾರು ಹಂಗಾಮಿನಲ್ಲಿ ರಾಜ್ಯದ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದಾದ ನಂತರ ಹಿಂಗಾರು ಮಳೆ ಕೂಡ ಕೈಕೊಟ್ಟು, ಬೆಳೆಗಳೆಲ್ಲ ಒಣಗಿ ಹೋಗಿವೆ. ಪರಿಸ್ಥಿತಿ ಗಂಭೀರವಾಗಿದ್ದು ರಾಜ್ಯದ ಒಟ್ಟು 176 ತಾಲೂಕುಗಳ ಪೈಕಿ 156 ತಾಲೂಕುಗಳನ್ನು ಹಿಂಗಾರು ಅವಧಿಯಲ್ಲಿ ಬರಪೀಡಿತ ಎಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಗಮನ ಸೆಳೆದಿದ್ದಾರೆ. ರಾಜ್ಯದ ಮುಂಗಾರು ಹಂಗಾಮಿನ ಬರಪರಿಸ್ಥಿತಿ ಕುರಿತು ವಿವರಿಸಿ, ಕೇಂದ್ರದಿಂದ 2,434 ಕೋಟಿ ರೂ. ನೆರವು ಕೋರಿ 2018ರ ಅಕ್ಟೋಬರ್ 29ರಂದು ತಮಗೆ ಮನವಿ ಸಲ್ಲಿಸಲಾಯಿತು. ಅದಾದ ಬಳಿಕ ಕೇಂದ್ರದ ಅಂತರ ಸಚಿವಾಲಯ ತಂಡ 2018ರ ನ.17ರಿಂದ 19ರವರೆಗೆ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿದೆ.

ಈ ತಂಡವು ಸಲ್ಲಿಸಿರುವ ವರದಿಯನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿಯು ಪರಿಗಣಿಸಿದ್ದು, ಮುಂದಿನ ಕ್ರಮಕ್ಕಾಗಿ ಗೃಹ ಸಚಿವಾಲಯದ ಉನ್ನತಮಟ್ಟದ ಸಮಿತಿಗೆ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ ಎಂದು ದೇಶಪಾಂಡೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ, ಪರಿಸ್ಥಿತಿಯನ್ನುಇನ್ನಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಕೇಂದ್ರದ ನೆರವು ಅಗತ್ಯವಾಗಿದೆ. ಆದ್ದರಿಂದ ತಾವು ಈ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಮುಂಗಾರು ಹಂಗಾಮಿನ ಬರದ ಪರಿಹಾರದ ಮೊತ್ತವನ್ನು ಆದಷ್ಟು ಬೇಗನೇ ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಜತೆಗೆ ಎಸ್.ಡಿ.ಆರ್.ಎಫ್. ನಿಧಿಯಿಂದ ರಾಜ್ಯಕ್ಕೆ ಬರಬೇಕಾದ ಎರಡನೇ ಕಂತಿನ ಹಣವನ್ನೂ ಪೂರೈಸಬೇಕು ಎಂದು ಸಚಿವ ಆರ್. ವಿ. ದೇಶಪಾಂಡೆ ಅವರು ಕೋರಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.