ಸುವಿಚಾರ

ದರಿದ್ರತ್ವೇ ದ್ವಿಭಾರ್ಯತ್ವಂ ಪಥಿಕ್ಷೇತ್ರಂ ಕೃಷಿದ್ವಯಮ್
ಪ್ರಾತಿಭಾವ್ಯಂ ಚ ಸಾಕ್ಷಿತ್ವಂ ಪಂಚಾನರ್ಥಾಃ ಸ್ವಯಂಕೃತಾಃ ||

ಬಡತನದಲ್ಲಿದ್ದಾಗಲೂ ಎರಡೆರಡು ಹೆಂಡತಿಯರನ್ನು ಹೊಂದಿರುವುದು, ಮನೆಯನ್ನು ತೀರಾ ಜನ ತಿರುಗಾಡುವ ಹಾದಿಯ ಅಂಚಲ್ಲೇ ಕಟ್ಟಿಕೊಂಡಿರುವುದು, ಎರಡೆರಡು ಬೇರೆ ಬೇರೆ ಜಾಗದಲ್ಲಿ ಕೃಷಿ ಕ್ಷೇತ್ರವನ್ನು ಹೊಂದಿರುವುದು, ಇನ್ನೊಬ್ಬರ ಸಾಲಕ್ಕೆ ತಾನು ಜಾಮೀನು ಹಾಕುವುದು, ಇನ್ನೊಬ್ಬರ ಖಟ್ಲೆಯಲ್ಲಿ ಸಾಕ್ಷಿಯಾಗಿ ವಹಿಸಿಕೊಳ್ಳುವುದು – ಈ ಐದು ಅನರ್ಥಗಳು ಮಾನವನು ತಾನೇ ಮಾಡಿಕೊಳ್ಳುವ ದುರಂತಗಳಾಗಿವೆ.
ಎರಡು ಹೆಂಡಿರನ್ನು ಹೊಂದಿರಲೇ ಬೇಕು ಅನ್ನುವ ಅತೀವ ಬಯಕೆಯಿರುವಾತ ಅದಕ್ಕೆ ತಕ್ಕಷ್ಟು ಸಿರಿವಂತನೂ ಆಗಿರಬೇಕಾದ್ದು ಅನಿವಾರ್ಯ. ಹಿಂದೂ ವಿವಾಹ ಕಾಯ್ದೆಯಂತೆ ಮೊದಲ ಹೆಂಡತಿಯನ್ನು ತೊರೆದೇ ಇನ್ನೊಂದು ಮದುವೆಯಾಗುವುದಾದರೂ ಮೊದಲ ಹೆಂಡತಿಗೆ ಜೀವಾನಾಂಶ ಕೊಡಲಾದರೂ ಹಣ ಇರಬೇಕಾಯ್ತಲ್ಲ! ಹಾಗೇ ಹಾದಿಯಂಚಿಗೆ ಮನೆ ಕಟ್ಟಿಕೊಂಡವರಿಗೆ ರಾತ್ರಿಯೂ ನಿದ್ರೆಯೆಂಬುದು ಮರೀಚಿಕೆಯೇ, ಭಯ ಬೇರೆ. ಎರಡೆರಡು ಜಮೀನು ನಿರ್ವಹಣೆ ಮಾಡುವ ಕೃಷಿಕನ ಹೆಣಗಾಟವನ್ನು ಬಲ್ಲವನೇ ಬಲ್ಲ. ಕೃಷಿದ್ವಯಂ ಅನ್ನುವುದಕ್ಕೆ ಎರಡು ಉದ್ಯೋಗ ಅಂತಲೂ ಅರ್ಥ ಮಾಡಬಹುದು – ಅದೂ ಸಹ ಕಷ್ಟಕರವಾದ ಪರಿಸ್ಥಿತಿಯೇ ಹೌದು. ಇನ್ನು ಸಾಲಕ್ಕೆ ಜಾಮೀನು ಕೊಡುವ ಮತ್ತು ಇನ್ನೊಬ್ಬರ ಕೇಸಲ್ಲಿ ಸಾಕ್ಷಿ ನುಡಿಯುವ ಕೆಲಸದಲ್ಲಿ ಎಲ್ಲ ಕಳೆದುಕೊಂಡವರಿದ್ದಾರೆ. ಹಾಗಾಗಿ ಈ ಐದು ಸಂಗತಿಗಳು ನಾವು ನಾವೇ ನಮಗೆ ತಂದುಕೊಳ್ಳಬಹುದಾದ ಅನರ್ಥಪರಂಪರೆಯಾಗಿದೆ ಅಂತ ಶ್ಲೋಕದ ಆಶಯ.
– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.