ಮೈಕ್ರೋ ಫೈನಾನ್ಸ್ ಸಾಲ ವಸೂಲಿ ನೆಪದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದೆ; ಮಂಜುನಾಥ ಆಗೇರ

ಕಾರವಾರ: ಕೆಲ ಮೈಕ್ರೋ ಫೈನಾನ್ಸ್ ಹಾಗೂ ಸ್ವ ಸಹಾಯ ಸಂಘಗಳು ಸಾಲ ವಸೂಲಿ ಮಾಡುವ ನೆಪದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ಆಗೇರ ಆಗ್ರಹಿಸಿದ್ದಾರೆ.
ಇಲ್ಲಿನ ಪ್ರತಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲವು ಸ್ವ ಸಹಾಯ ಸಂಘಗಳು ಸುಮಾರು 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೂ ಸಾಲ ನೀಡುತ್ತಿದ್ದಾರೆ. ಇದು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೇ ವಿಪರೀತ ಬಡ್ಡಿ ಆಕರಿಸುತ್ತಿವೆ.
ಇದರಿಂದ ಸಾಲ ಪಡೆದ ಮಹಿಳೆಯರಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಇದಲ್ಲದೇ ಸಾಲ ವಸೂಲಿಯ ಮಾಡುವ ನೆಪದಲ್ಲಿ ಮಹಿಳೆಯರ ಮನೆಯಲ್ಲಿ ಅಪರಿಚಿತ ಪುರುಷರು ರಾತ್ರಿ 10 ಗಂಟೆಯವರೆಗೂ ಮನೆಯಲ್ಲಿ ಇರುವುದು ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ ಎಂದರು.

ಸ್ವ ಸಹಾಯ ಸಂಘಗಳಲ್ಲಿ ಸಾಲಗಾರರು ತುಂಬಿದ ಹಣ ಹಾಗೂ ಸದಸ್ಯರ ಉಳಿತಾಯ ಹಣವನ್ನು ಸದಸ್ಯರದ್ದೇ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಆದರೆ ಬಹುತೇಕ ಸ್ವ ಸಹಾಯ ಸಂಘಗಳಲ್ಲಿ ಸದಸ್ಯರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿಲ್ಲ. ಸಂಘದಿಂದಲೇ ಹಣ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡ್ಡಿ ಹಣ ಹೇಗೆ ಖರ್ಚಾಗಿದೆ ಎಂಬುದು ಪಾರದರ್ಶಕವಾಗಿಲ್ಲ ಎಂದರು.
ಈ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಸಾಲ ವಸೂಲಿಗಾರರ ಕಿರುಕುಳದಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿ ಡೆತ್ ನೋಟ್‍ನಲ್ಲಿ ಆರೋಪಿಗಳ ಹೆಸರನ್ನು ಬರೆದಿದ್ದಾಳೆ. ಆದರೆ ಘಟನೆ ನಡೆದು 15 ದಿನ ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿಗಳನ್ನು ಶೀಘ್ರವೇ ಬಂಧಿಸಲು ಕ್ರಮ ಆಗಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸರಸ್ವತಿ ಗುನಗಾ, ಮೃತ ಯುವತಿಯ ತಾಯಿ ಅರ್ಚನಾ ಸೇರಿದಂತೆ ಇನ್ನಿತರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.