ಕಾರವಾರ: ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತವನ್ನು ಖರೀದಿ ಮಾಡಲು ರಾಜ್ಯ ಸರಕಾರವು ಆದೇಶವನ್ನು ಹೊರಡಿಸಿರುವ ಪ್ರಯುಕ್ತ ಈ ಕೆಳಗಿನ ಅಂಶಗಳನ್ನು ರೈತರು ಪಾಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಹೊಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 35 ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದ್ದು ಆಯಾ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡುವ ರೈತರು ಆನ್ ಲೈನ್ ಮೂಲಕ ಡಿ. 15 ರೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.
ನೋಂದಾಯಿತ ರೈತರಿಂದ ಮಾತ್ರ ಡಿ.16 ರಿಂದ ಭತ್ತವನ್ನು ಖರೀದಿಸಲಾಗುವುದು. ಖರೀದಿಸುವ ಭತ್ತಕ್ಕೆ ಸಾಮಾನ್ಯ ಧಾನ್ಯಕ್ಕೆ ರೂ.1750/ ಎ-ಗ್ರೇಡ್ ಭತ್ತ ಧಾನ್ಯಕ್ಕೆ ರೂ.1770 ಪ್ರತಿ ಕ್ವಿಂಟಲ್ನಂತೆ ದರವನ್ನು ನಿಗದಿಪಡಿಸಲಾಗಿರುತ್ತದೆ. ಹಾಗೂ ಗರಿಷ್ಠ 40 ಕ್ವಿಂಟಲ್ ಖರೀದಿ ಇರುತ್ತದೆ.
ಯೋಜನೆಯ ಲಾಭವನ್ನು ಜಿಲ್ಲೆಯ ಎಲ್ಲ ರೈತ ಬಾಂದವರು ಸದುಪಯೋಗಪಡಿಸಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.