ಪ್ರತಿ ವ್ಯಕ್ತಿಯ ಸಾಧನೆಗೆ ಸಮಾಜದ ಪ್ರೋತ್ಸಾಹ ಕಾರಣ; ಶ್ರೀನಿವಾಸ ಹೆಬ್ಬಾರ್

ಶಿರಸಿ: ಪ್ರತಿಯೊಬ್ಬ ವ್ಯಕ್ತಿ ಬೆಳೆದಿದ್ದಾನೆ ಅಥವಾ ಸಾಧನೆ ಮಾಡಿದ್ದಾನೆ ಎಂದರೆ ಅದು ಈ ಸಮಾಜದ ಪ್ರೋತ್ಸಾಹ ಕಾರಣವಾಗಿದೆ. ಆ ವ್ಯಕ್ತಿ ಈ ಸಮಾಜಕ್ಕಾಗಿ ತನ್ನದೇ ಆದ ಕೊಡುಗೆಗಳನ್ನು ನೀಡಿದಾಗ ಜೀವನ ಕೂಡಾ ಸಾರ್ಥಕವಾಗುತ್ತದೆ ಎಂದು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹೇಳಿದರು.
ಇಲ್ಲಿನ ಯಡಳ್ಳಿ ವಿದ್ಯೋದಯ ಪ. ಪೂ ಕಾಲೇಜು ಆವಾರದಲ್ಲಿ ಸಂಘಟಿಸಲಾಗಿದ್ದ ಯಡಳ್ಳಿ ಉತ್ಸವದಲ್ಲಿ ಮಾತನಾಡಿದರು. ಜೀವಮಾನದ ಸಾಧನೆ ಮಾಡುತ್ತಿರುವ ಉದ್ಯಮಿಗಳೂ ಆದ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಿರಸಿಯ ಎಮ್.ಇ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಮ್.ಹೆಗಡೆ ಮುಳಖಂಡ ಮಾತನಾಡಿ ಇಂದಿನ ಯುವಪೀಳಿಗೆ ಟಿ.ವಿ ಹಾಗೂ ಮೊಬೈಲ್ ಗಳ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿಗೆ ವಾಲುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ನಮ್ಮ ಮೂಲ ಕಲೆ ಸಂಸ್ಕೃತಿಯೂ ಉಳಿಯಬೇಕೆಂದಾದರೆ ಆಯಾ ಗ್ರಾಮೀಣ ಭಾಗದಲ್ಲಿ ಸಂಘಟನೆಯ ಮೂಲಕ ಕಲೆಯ ವಿವಿಧ ಪ್ರಕಾರಗಳನ್ನು ಪ್ರಚುರಗೊಳಿಸುವ ಕೆಲಸ ಕೂಡಾ ನಡೆದು ಅದರ ಮಹತ್ವ ಮತ್ತು ಅದರಿಂದ ಸಿಗುವ ಒಳ್ಳೆಯ ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಸಬೇಕಾಗಿದೆ ಅಂದಾಗ ಮಾತ್ರ ನಮ್ಮ ಸಂಸ್ಕೃತಿಯುಳ್ಳ ಕಲೆ ಉಳಿಯುತ್ತದೆ ಎನ್ನುತ್ತಾ ಸಮಾಜಕ್ಕೆ ಮಹತ್ತರವಾದ ಕೊಡುಗೆ ನೀಡುತ್ತಿರುವವರನ್ನು ಗೌರವಿಸುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಅತಿಥಿಯಾಗಿದ್ದ ಶಿರಸಿ ತಾಪಂ ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ ಸಮಾಜಕ್ಕೆ ಅತಿ ಅವಶ್ಯವಾಗಿ ಬೇಕಾದ ನೀರಿನ ಕೆರೆಗಳ ಕುರಿತು ಹೆಚ್ಚು ಕಾರ್ಯೋನ್ಮುಖರಾದ ಹೆಬ್ಬಾರ್ ದಂಪತಿಗಳಿಗೆ ಸನ್ಮಾನಿಸಿದ್ದು ಹೆಮ್ಮೆಯ ಸಂಗತಿ ಎಂದರು. ಶಿರಸಿ ಮಕ್ಕಳ ಕಲ್ಯಾಣ ಸದಸ್ಯೆ ಅಂಜನಾ ಭಟ್ಟ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ರಕ್ತದಾನಿ ಹಾಗೂ ಸಂಗೀತಾಭಿಮಾನಿ ನೇತ್ರಾವತಿ.ಟಿ.ಹಳೇಮನೆ, ಕಾನಗೋಡ್ ಗ್ರೂಫ್ ಸೇವಾ ಸಹಕಾರಿ ಸಂಘ.ನಿ. ಯಡಳ್ಳಿ ಇದರ ನಿರ್ದೇಶಕ ಮಂಜುನಾಥ ಹೆಗಡೆ ಕಬ್ನಳ್ಳಿ, ಖ್ಯಾತ ತಬಲಾ ವಾದಕ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ, ಉಪಸ್ಥಿತರಿದ್ದರು. ಯಡಳ್ಳಿ ಮಾ.ಶಿ.ಪ್ರ.ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ವಿ.ಹೆಗಡೆ ಕಾನಗೋಡ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರದಲ್ಲಿ ಬಾಲನಟನಾಗಿ ಗಮನ ಸೆಳೆಯುತ್ತಿರುವ ಸಮರ್ಥ ಹೆಗಡೆ ವಾನಳ್ಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಂ.ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ನವರು ಸಂಘಟಿಸಿದ್ದ ಯಡಳ್ಳಿ ಉತ್ಸವದಲ್ಲಿ ಮಾಧ್ಯಮಿಕ ಶಿಕ್ಷಣ ಸಂಸ್ಥೆಯ ಮುಖ್ಯಾಧ್ಯಾಪಕರಾದ ಮಹೇಶ ಭಟ್ಟ ಸೋಮಸಾಗರ ಸ್ವಾಗತಿಸಿ, ಸನ್ಮಾನ ಪತ್ರವಾಚಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ವಂದಿಸಿದರೆ, ಕಾರ್ಯಕ್ರಮ ಸಂಘಟಕ ಗಿರಿಧರ ಕಬ್ನಳ್ಳಿ ಪ್ರಾಸ್ಥಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.