ಸ್ವಾದಿಷ್ಟಕರ ಮಿಲ್ಕ್ ಮೈಸೂರ್ ಪಾಕ್ ಮಾಡಿ ಸವಿಯಿರಿ

ಅಡುಗೆ ಮನೆ: ಕೆಲವೊಂದು ವಿಶೇಷ ಸಿಹಿ ಭಕ್ಷ್ಯಗಳಿಗಂತೂ ಮಾರುಕಟ್ಟೆಗೇ ಹೋಗಿ ಬೇಕಾಗುವ ಸಾಮಗ್ರಿಗಳನ್ನು ತರುವ ಪರಿಸ್ಥಿತಿ ಎದುರಾಗುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ, ಸಮಯದ ಅಭಾವವಿರುತ್ತದೆ. ಅಂತಹ ಸಮಯದಲ್ಲಿ ಚಿಂತಿಸುವ ಅವಶ್ಯಕತೆ ಇಲ್ಲ. ಇಲ್ಲಿದೆ ಒಂದು ಸರಳವಾದ ರೆಸಿಪಿ, “ಮಿಲ್ಕ್ ಮೈಸೂರ್ ಪಾಕ್”.

ತಯಾರಿಸಲು ಬೇಕಾಗುವ ಸಾಮಗ್ರಿಗಳು: ಹಾಲು 1 ಕಪ್, ಕಡಲೇ ಹಿಟ್ಟು 1 ಕಪ್, ತುಪ್ಪ 1 ಕಪ್, ಸಕ್ಕರೆ 2 ಕಪ್, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ ಚೂರುಗಳು ಸ್ವಲ್ಪ.

ಮೈಸೂರು ಪಾಕ್ ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಯನ್ನು ಒಲೆಯ ಮೇಲೆ ಇಡಬೇಕು. ಕಾದ ಬಾಣಲೆಗೆ ಮೊದಲೇ ಅಳಿದಿಟ್ಟುಕೊಂಡ ಕಡಲೇ ಹಿಟ್ಟನ್ನು ಹಾಕಿ ಘಮ್ ಎನ್ನುವವರೆಗೂ ಹುರಿದಿಟ್ಟುಕೊಳ್ಳಬೇಕು. ಒಲೆಯ ಮೇಲಿಟ್ಟ ಕಾದ ದಪ್ಪ ತಳದ ಪಾತ್ರೆಗೆ ಸಕ್ಕರೆ ಮತ್ತು ಹಾಲನ್ನು ಹಾಕಬೇಕು. ಸಕ್ಕರೆಯನ್ನು ಕರಗುವವರೆಗೂ ಕೈಯಾಡಿಸುತ್ತಾ ಇರಬೇಕು. ಸಕ್ಕರೆ ಕರಗಿದ ನಂತರ ಆ ಮಿಶ್ರಣ ಕುದಿಯಲಾರಂಬಿಸುತ್ತೆ. ನಂತರ ಹುರಿದಿಟ್ಟುಕೊಂಡ ಕಡಲೇಹಿಟ್ಟನ್ನು ನಿಧಾನವಾಗಿ ಕೈಯಾಡಿಸುತ್ತಾ ಹಾಕಬೇಕು. ಕೈ ಆಡಿಸುವುದನ್ನು ಬಿಡಬಾರದು. ಹೀಗೆ ಮಾಡುವುದರಿಂದ ಕಡಲೇ ಹಿಟ್ಟು ಮಿಶ್ರಣದ ಜೊತೆ ಹೊಂದಿಕೊಳ್ಳುತ್ತದೆ,ಗಂಟಾಗುವುದಿಲ್ಲ. ಸ್ವಲ್ಪ ಸ್ವಲ್ಪ ತುಪ್ಪವನ್ನು ಹಾಕುತ್ತಾ ಮಿಶ್ರಣವು ಗಟ್ಟಿಯಾಗುವವರೆಗೆ ಕೆದಕುತ್ತಾ ಇರಬೇಕು. ಗಟ್ಟಿಯಾಗುವಾಗ ಮಿಶ್ರಣವು ಪಾತ್ರೆಯ ತಳ ಬಿಡುತ್ತಾ ಬರುತ್ತದೆ. ಗಟ್ಟಿಯಾದ ನಂತರ ತುಪ್ಪ ಸವರಿದ ದುಂಡಾಕಾರದ ತಟ್ಟೆಗೆ ಹಾಕಿಕೊಳ್ಳಬೇಕು. ತಟ್ಟೆಯ ಪೂರ್ತಿ ಭಾಗ ಮಿಶ್ರಣವು ಸಮನಾಗಿರುವಂತೆ ತಟ್ಟಬೇಕು. ಸ್ವಲ್ಪ ಆರಲು ಬಿಡಬೇಕು. ಸ್ವಲ್ಪ ಬೆಚ್ಚಗೆ ಇರುವಾಗಲೇ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಕೊಳ್ಳಬಹುದು. ಕತ್ತರಿಸಕೊಂಡ ನಂತರ ಆ ಬಿಲ್ಲೆಗಳ ಮೇಲೆ ಒಂದೊಂದು ಗೋಡಂಬಿ ತುಂಡುಗಳನ್ನು ಅಲಂಕಾರಿಕವಾಗಿ ಇಡಬಹುದು. ಹೀಗೆ ಮಾಡುವುದರಿಂದ ಈ ಸಿಹಿ ತಿನಿಸಿನ ಅಂದ ಹೆಚ್ಚುತ್ತದೆ. ನಿಮಗೆ ಗೋಡಂಬಿ ಬೇಡವಾದ್ದಲ್ಲಿ, ಬಾದಾಮಿ, ಪಿಸ್ತಾ, ಒಣ ದ್ರಾಕ್ಷಿ ಯಾವುದನ್ನಾದರೂ ಬಳಸಬಹುದು. ಹೀಗೆ ಮಾಡಿದಲ್ಲಿ ರುಚಿರುಚಿಯಾದ, ಬಾಯಲ್ಲಿ ಇಟ್ಟರೆ ಕರಗುವ ಮಿಲ್ಕ್ ಮೈಸೂರ್ ಪಾಕ್ ಸವಿಯಲು ಸಿದ್ಧವಾಗುತ್ತದೆ.

Categories: ಅಡುಗೆ ಮನೆ

Leave A Reply

Your email address will not be published.