ಸರ್ಕಾರ ದಿವ್ಯಾಂಗರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ; ಕಲ್ಯಾಣಾಧಿಕಾರಿ ಸತೀಶ ನಾಯ್ಕ

ಕಾರವಾರ: ದಿವ್ಯಾಂಗರಿಗೆ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಆದರೆ ಸರಕಾರದೊಂದಿಗೆ ಸಂಘ ಸಂಸ್ಥೆಗಳ ಹಾಗೂ ಸಮುದಾಯದವರ ಸಹಕಾರವು ಅವರಿಗೆ ಅಗತ್ಯವಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸತೀಶ ನಾಯ್ಕ ಹೇಳಿದರು.
ನಗರದಲ್ಲಿ ವಿಶ್ವ ದಿವ್ಯಾಂಗರ ದಿನಾಚರಣೆಯ ನಿಮಿತ್ತ ಆಝಾದ್ ಯುಥ್ ಕ್ಲಬ್ ಕಾರವಾರ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಜಂಟಿಯಾಗಿ ಹಮ್ಮಿಕೊಂಡ ಸನ್ಮಾನ ಹಾಗೂ ದವಸ ಧಾನ್ಯಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರವಾರ ರೋಟರಿ ಕ್ಲಬ್‍ನ ಅಧ್ಯಕ್ಷ ಅನಮೋಲ್ ರೇವಣ್‍ಕರ್ ಮಾತನಾಡಿ ದಿವ್ಯಾಂಗರು ಬೇರೆ ಬೇರೆ ಅಂಗವೈಕಲ್ಯದಿಂದ ಬಳಲುತ್ತಿದ್ದರೂ ತಮ್ಮ ಹೊಟ್ಟೆಪಾಡಿಗಾಗಿ ಒಂದಲ್ಲ ಒಂದು ಕೆಲಸಮಾಡಿ ಜೀವನವನ್ನು ನಡೆಸುತ್ತಿದ್ದಾರೆ. ಅವರಿಗೆ ಅನುಕಂಪದ ಅವಶ್ಯಕತೆ ಇಲ್ಲ. ಸಹಾಯ ಸಹಕಾರದ ಅವಶ್ಯಕತೆ ಇದೆ. ನಾವೆಲ್ಲರೂ ಸೇರಿ ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಝಾದ್ ಯುಥ್ ಕ್ಲಬ್ ಚೀಫ್ ಪ್ಯಾಟ್ರನ್ ಇಬ್ರಾಹಿಂ ಕಲ್ಲೂರ್ ಮಾತನಾಡಿ ಅಂಗವಿಕಲತೆ ಎನ್ನುವುದು ಶಾಪವಲ್ಲ. ದಿವ್ಯಾಂಗರೂ ಸಹ ಸಾಮಾನ್ಯ ಜನರಂತೆ ಜೀವನವನ್ನು ನಡೆಸಬಹುದು. ಅವರಿಗೆ ನಮ್ಮೆಲ್ಲರ ಮಾರ್ಗದರ್ಶನ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ದಿವ್ಯಾಂಗರಾದರೂ ಮೀನು ಮಾರಾಟ ಮಾಡಿ ಹಾಗೂ ದಿನಪತ್ರಿಕೆ ಹಂಚಿ ಜೀವನ ಸಾಗಿಸುತಿರುವ ಕೋಡಿಬಾಗದ ಸರ್ವೋದಯ ನಗರದ ನಿವಾಸಿ ಮಂಜುನಾಥ ನಾಗಪ್ಪ ಬಾನಾವಳಿ ಅವರಿಗೆ ದವಸ ಧಾನ್ಯಗಳನ್ನು ನೀಡಿ ಸನ್ಮಾನಿಸಲಾಯಿತು.
ಫೈರೋಜಾ ಬೇಗಂ ಶೇಖ್ ಸ್ವಾಗತಿಸಿದರು. ಮೊಹಮ್ಮದ್ ಉಸ್ಮಾನ್ ಶೇಖ್ ವಂದಿಸಿದರು. ಈ ಸಂದರ್ಭದಲ್ಲಿ ಮುಖಂಡ ನಜೀರ್ ಅಹಮದ್ ಯು.ಶೇಖ್, ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಲ.ಮಂಜುನಾಥ ಪವಾರ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.