ಮಹಿಳೆ ಸ್ವಾವಲಂಬಿಯಾದರೆ ಆರ್ಥಿಕ ಅಭಿವೃದ್ಧಿ ಸಾಧ್ಯ; ಶ್ರೀಲತಾ ಕಾಳೇರಮನೆ


ಶಿರಸಿ: ಮನೆಯಲ್ಲಿಯೆ ಇರುವ ಮಹಿಳೆಯರು ಹೊಲಿಗೆ, ವಸ್ತ್ರ ವಿನ್ಯಾಸ ತರಬೇತಿಯನ್ನು ಪಡೆದು ಉದ್ಯೋಗ ಮಾಡುವುದಕ್ಕೆ ಮುಂದಾಗಬೇಕು. ಮನೆ ಕೆಲಸದೊಂದಿಗೆ ದುಡಿಮೆ ಮಾಡುವ ಅವಕಾಶ ಇದೆ. ನಾವು ಸ್ವಾವಂಲಂಬಿಗಳಾದರೆ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ತಾಲೂಕಾ ಪಂಚಾಯತ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಹೇಳಿದರು.
ನಗರದ ಕಶ್ಯಪ್ ಬಿಲ್ಡಿಂಗ್‍ನಲ್ಲಿರುವ ಆಧಾರ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ವಸ್ತ್ರ ವಿನ್ಯಾಸ ಹೊಲಿಗೆ ತರಬೇತಿಯ ಅಭ್ಯರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು. ಇಂದು ಸರ್ಕಾರಗಳಿಂದ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ತರಲಾಗಿದೆ. ಅದರ ಅವಕಾಶವನ್ನು ಪಡೆದುಕೊಂಡು ಪ್ರಯೋಜನವನ್ನು ಪಡೆದುಕೊಳ್ಳಬೇಕು.ನಾವು ಸಮಾಜದಲ್ಲಿ ಒಳ್ಳೆಯ ಜೀವನವನ್ನು ನಡೆಸುವುದಕ್ಕೆ ನಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಅದಕ್ಕೆ ನಾವು ಉದ್ಯೋಗಿಗಳಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ತೆರಿಗೆ ಸಲಹೆಗಾರ ನರೇಂದ್ರ ಹಿರೇಕೈ ಮಾತನಾಡಿ ಮಹಿಳೆಯರಿಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸ್ವ-ಉದ್ಯೋಗ ಮಾಡುವುದಕ್ಕೆ ಸಾಲ ಸೌಲಭ್ಯ ನೀಡಲಾಗುತ್ತದೆ. ಆದರೆ ಆ ಕ್ಷೇತ್ರದಲ್ಲಿ ತರಬೇತಿ ಮತ್ತು ಪ್ರಮಾಣ ಪತ್ರ ಮುಖ್ಯವಾಗುತ್ತದೆ. ವೃತ್ತಿಯಲ್ಲಿ ಕೌಶಲ್ಯ ಹೊಂದಲು ತರಬೇತಿ ಮುಖ್ಯ. ಈ ತರಬೇತಿ ನಿಮ್ಮ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಧಾರ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ ಸಮಾಜ ಉದ್ಯೋಗಸ್ಥರನ್ನು ಗೌರವದಿಂದ ಕಾಣುತ್ತದೆ. ಆದರೆ ಸ್ವ-ಉದ್ಯೋಗ ಮಾಡುವವರಿಗೆ ಇನ್ನೂ ಹೆಚ್ಚಿನ ಗೌರವದಿಂದ ಕಾಣುತ್ತದೆ. ಅದು ನಮ್ಮ ಆತ್ಮ ಗೌರವನ್ನು ಹೆಚ್ಚಿಸುತ್ತದೆ. ಸರಕಾರಿ ನೌಕರಿ ಇಂದಿನ ದಿನದಲ್ಲಿ ಎಲ್ಲರಿಗೂ ಸಿಗುವುದಕ್ಕೆ ಸಾಧ್ಯವಿಲ್ಲ. ಆದರೆ ಸ್ವ-ಉದ್ಯೋಗವನ್ನು ಮಾಡುವ ಅವಕಾಶಗಳಿವೆ. ಆ ಬಗ್ಗೆ ನಾವು ಯೋಚನೆಯನ್ನು ಮಾಡಬೇಕು. ವೃತಿ ತರಬೇತಿಯನ್ನು ಪಡೆದುಕೊಳ್ಳಬೇಕು. ಮಹಿಳೆಯರಿಗೆ ವಸ್ತ್ರ ವಿನ್ಯಾಸ ಒಂದು ಉತ್ತಮವಾದ ಉದ್ಯೋಗವಾಗಿದೆ ಎಂದರು.
ಆಧಾರ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕಿ ಪುಷ್ಪಲತಾ ನಾಯ್ಕ, ತರಬೇತು ಶಿಕ್ಷಕಿ ಉಮಾ ಮಹೇಶ ನಾಯ್ಕ ಉಪಸ್ಥಿತರಿದ್ದರು. ಆಶಾ ಆಚಾರಿ ಪ್ರಾರ್ಥಿಸಿದರು.ಆಧಾರ ಸಂಸ್ಥೆಯ ಸಹ ಸಂಯೋಜಕ ಟಿ.ಕೆ.ಎಂ ಆಜಾದ್ ಕಾರ್ಯಕ್ರಮ ನಿರ್ವಹಿಸಿದರು.ತರಬೇತಿ ವಿಭಾಗದ ರೇಷ್ಮಾ ಪ್ರವೀಣ ದೇಶಪಾಂಡೆ ಸ್ವಾಗತಿಸಿದರು. ವಿದ್ಯಾ ಭಟ್ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.