ನಗರದ ರಸ್ತೆ ಅಂಚುಗಳಲ್ಲಿನ ಅಕ್ರಮ ಆಹಾರ ಅಂಗಡಿಗಳ ತೆರವಿಗೆ ಸೂಕ್ತ ಕ್ರಮ; ಶಾಸಕ ಕಾಗೇರಿ

 

ಶಿರಸಿ: ನಗರಾದ್ಯಂತ ರಸ್ತೆ ಅಂಚುಗಳಲ್ಲಿ ಸೇರಿದಂತೆ ಇತರೆ ಕಡೆಗಳಲ್ಲಿ ತಲೆ ಎತ್ತುತ್ತಿರುವ ಅಕ್ರಮ ಆಹಾರ ಅಂಗಡಿಗಳನ್ನು ನಗರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತೆರವುಗೊಳಿಸಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

ಗುರುವಾರ ಇಲ್ಲಿನ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಗರದಲ್ಲಿ ಕಾನೂನು ಬಾಹಿರವಾಗಿ ತಲೆ ಎತ್ತಿರುವ ಆಹಾರ ಮಾರಾಟ ಅಂಗಡಿಗಳನ್ನು ತೆರವು ಮಾಡಬೇಕು. ಅಸುರಕ್ಷಿತ ತಿಂಡಿ ಮಾರಾಟ ತಡೆಯಬೇಕು ಎಂದರು.

ಎಲ್ಲ ಕಡೆ ಭತ್ತದ ಗದ್ದೆ ಕಟಾವಾಗಿದೆ. ಅಡಕೆ ಕೊಯ್ಲು ಆರಂಭವಾಗಿದೆ. ಅಕಾಲಿಕ ಮಳೆಯಾದ ಪರಿಣಾಮ ಬೆಳೆ ಹಾಳಾಗಿದೆ. ತಕ್ಷಣ ವಿಮಾ ಕಂಪನಿಗೆ ಮಾಹಿತಿ ನೀಡಿ ಪರಿಹಾರ ನೀಡುವಲ್ಲಿ ಕ್ರಮವಹಿಸಬೇಕು. ಹಾನಿಯ ವರದಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಶಂಕರ ಹೆಗಡೆ, ಬೆಳೆ ಹಾಳಾದರೆ ಅದಕ್ಕೆ ಪರಿಹಾರ ನೀಡಲು ಅವಕಾಶವಿದೆ. ಅಕಾಲಿಕ ಮಳೆಯಿಂದಾದ ಹಾನಿಯ ಕುರಿತು ಮಾಹಿತಿ ಸಂಗ್ರಹಿಸುವಂತೆ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗೆ ಈ ಕುರಿತು ಸೂಚಿಸಲಾಗಿದೆ ಎಂದರು.

ಅತೀವೃಷ್ಟಿಯಿಂದ ಬೆಳೆಹಾನಿ ಅನುಭವಿಸಿದ 109 ರೈತರಿಗೆ 5.60 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದಂತೆ ಅಡಕೆ ಕೊಳೆ ರೋಗದ ಪರಿಹಾರದ ವಿಚಾರ ಮೂಲೆಗುಂಪಾಗಿದೆ ಎಂದು ಕಾಗೇರಿ ಅಸಮಾಧಾನ ಹೊರಹಾಕಿದರು.

ಈ ವೇಳೆ ತಹಶೀಲ್ದಾರ ಅಮರೇಶ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪ್ರಭಾವತಿ ಗೌಡ, ಉಷಾ ಹೆಗಡೆ, ಸದಸ್ಯರಾದ ರವಿ ಹೆಗಡೆ, ನರಸಿಂಹ ಹೆಗಡೆ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚನ್ನಣ್ಣನವರ್ ಹಾಗೂ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.